ಲೀಡ್ಸ್ :ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ನಡುವಿನ ಆ್ಯಶಸ್ ಟೆಸ್ಟ್ ಸರಣಿಯ ಮೂರನೇ ಪಂದ್ಯ ಹೆಡಿಂಗ್ಲಿಯಲ್ಲಿ ನಡೆಯುತ್ತಿದೆ. ಮೊದಲನೇ ದಿನದಾಟದಲ್ಲಿ ಇಂಗ್ಲೆಂಡ್ ಬೌಲಿಂಗ್ ದಾಳಿಗೆ ಸಿಲುಕಿದ ಆಸ್ಟ್ರೇಲಿಯಾ 268 ರನ್ಗಳಿಗೆ ಸರ್ವಪತನ ಕಂಡಿತು. ಆಸ್ಟ್ರೇಲಿಯಾ ಪರ ಮಿಚೆಲ್ ಮಾರ್ಷ್ (118) ಶತಕ ಸಿಡಿಸಿ ತಂಡಕ್ಕೆ ಆಸರೆಯಾದರು. ನಾಲ್ಕು ವರ್ಷಗಳ ನಂತರ ಟೆಸ್ಟ್ ಪಂದ್ಯಕ್ಕೆ ಮರಳಿರುವ ಆಲ್ ರೌಂಡರ್ ಮಿಚೆಲ್ ಮಾರ್ಷ್ ನಿನ್ನೆಯ ಪಂದ್ಯದಲ್ಲಿ ಅಲ್ರೌಂಡರ್ ಪ್ರದರ್ಶನದ ಮೂಲಕ ಅದ್ಭುತ ಕಮ್‌ಬ್ಯಾಕ್ ಮಾಡಿದ್ದಾರೆ.
ಟಾಸ್ ಸೋತು ಬ್ಯಾಟಿಂಗ್ಗಿಳಿದ ಆಸೀಸ್, ಸ್ಕೋರ್ 85 ಆಗುವಷ್ಟರಲ್ಲೇ ಅಗ್ರ ನಾಲ್ಕು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ಮಾರ್ಷ್ ಶತಕದ ನೆರವಿನಿಂದ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ 263 ರನ್ ಗಳಿಸಿತ್ತು. ಇದರ ಹೊರತಾಗಿ ಉಳಿದ ಯಾವೊಬ್ಬ ಆಟಗಾರರೂ ಅರ್ಧಶತಕವನ್ನೂ ಗಳಿಸಲು ಸಾಧ್ಯವಾಗಲಿಲ್ಲ. ಕಳೆದ ವಾರಾಂತ್ಯದಲ್ಲಿ ಲಾರ್ಡ್ಸ್‌ನಲ್ಲಿ ಜಯಗಳಿಸಿದ ಬಳಿಕ ಕ್ಯಾಮರೂನ್ ಗ್ರೀನ್ ಸಣ್ಣ ಮಂಡಿರಜ್ಜು ಒತ್ತಡದಿಂದ ಮೂರನೇ ಟೆಸ್ಟ್ನಿಂದ ಹೊರಗುಳಿದ ಹಿನ್ನೆಲೆಯಲ್ಲಿ ಮಾರ್ಷ್ರನ್ನು ಆಯ್ಕೆ ಮಾಡಲಾಯಿತು. 2019ರಲ್ಲಿ ಟೆಸ್ಟ್ ತಂಡದಿಂದ ಕೈಬಿಡಲ್ಪಟ್ಟಾಗಿನಿಂದ ಕೇವಲ ಟಿ20 ಮತ್ತು ಏಕದಿನ ಪಂದ್ಯಗಳನ್ನು ಆಡುತ್ತಿದ್ದ ಮಾರ್ಷ್ ಉತ್ತಮ ಸಾಧನೆ ಮಾಡಿದ್ದಾರೆ. ಈ ಪಂದ್ಯದಲ್ಲಿ ಇಂಗ್ಲೆಂಡ್ ಬೌಲರ್ ಸ್ಟುವರ್ಟ್ ಬ್ರಾಡ್ 16ನೇ ಬಾರಿಗೆ ಡೇವಿಡ್ ವಾರ್ನರ್ ವಿಕೆಟ್ ಪಡೆದರು.