ಲಂಡನ್:ಇಲ್ಲಿ ನಡೆಯುತ್ತಿರುವ ಆ್ಯಶಸ್ ಸರಣಿಯ ಕೊನೆಯ, 5ನೇ ಟೆಸ್ಟ್ ಪಂದ್ಯ ರೋಚಕ ಘಟ್ಟದತ್ತ ಸಾಗುತ್ತಿದೆ. ಮೊದಲ ಇನಿಂಗ್ಸ್ನ ಅಲ್ಪ ಹಿನ್ನಡೆಯ ಹೊರತಾಗಿಯೂ ಇಂಗ್ಲೆಂಡ್ ಭರ್ಜರಿ ಕಮ್ಬ್ಯಾಕ್ ಮಾಡಿ 3 ದಿನದಾಂತ್ಯಕ್ಕೆ 2ನೇ ಇನಿಂಗ್ಸ್ನಲ್ಲಿ 9 ವಿಕೆಟ್ಗೆ 389 ರನ್ ಪೇರಿಸಿತು. ಇನ್ನೊಂದೆಡೆ, ತಂಡದ ಸ್ಟಾರ್ ವೇಗಿ ಸ್ಟುವರ್ಟ್ ಬ್ರಾಡ್ ಕ್ರಿಕೆಟ್‌ಗೆ ದಿಢೀರ್ ನಿವೃತ್ತಿ ಘೋಷಿಸಿದ್ದಾರೆ.
ಮೊದಲ ಇನಿಂಗ್ಸ್ನಲ್ಲಿ 12 ರನ್ಗಳ ಹಿನ್ನಡೆಯೊಂದಿಗೆ 2ನೇ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್, ಹ್ಯಾರಿ ಬ್ರೂಕ್ ಹೊರತುಪಡಿಸಿ ಎಲ್ಲ ಬ್ಯಾಟರ್ಗಳು ಅಬ್ಬರಿಸಿದರು. ಜಾಕ್ ಕ್ರಾವ್ಲೆ 73, ಬೆನ್ ಡಕೆಟ್ 42, ನಾಯಕ ಬೆನ್ ಸ್ಟ್ರೋಕ್ಸ್ 42, ಜಾನಿ ಬೈರ್ಸ್ಟೋವ್ 78, ಮೊಯಿನ್ ಅಲಿ 29 ರನ್ ಮಾಡಿದರು. ಪ್ರಥಮ ಇನಿಂಗ್ಸ್ನಲ್ಲಿ ಬೇಸ್ಬಾಲ್ ಮಾದರಿ ಬ್ಯಾಟ್ ಮಾಡಿದ್ದ ತಂಡ 2ನೇ ಇನಿಂಗ್ಸ್ನಲ್ಲೂ ಅದೇ ಮಾದರಿ ಅನುಸರಿಸಿ ಯಶ ಕಂಡಿತು.
ರೂಟ್ಗೆ ಶತಕ ಮಿಸ್:ಮೊದಲ ಇನಿಂಗ್ಸ್ನಲ್ಲಿ ವೈಫಲ್ಯ ಅನುಭವಿಸಿದ್ದ ಜೋಯ್ ರೂಟ್ ಅಬ್ಬರಿಸಿದರು. ಏಕದಿನ ಮಾದರಿಯಲ್ಲಿ ಬ್ಯಾಟ್ ಮಾಡಿದ ಇಂಗ್ಲೆಂಡ್ ಆಟಗಾರ 105 ಎಸೆತಗಳಲ್ಲಿ 91 ರನ್ ಮಾಡಿದರು. ಇದರಲ್ಲಿ 11 ಬೌಂಡರಿ, 1 ಸಿಕ್ಸರ್ ಇದ್ದವು. ಶತಕದ ಅಂಚಿನಲ್ಲಿ ರೂಟ್, ಟಾಡ್ ಮೊರ್ಪೆ ಬೌಲಿಂಗ್ನಲ್ಲಿ ಕ್ಲೀನ್ಬೌಲ್ಡ್ ಆಗಿ ಶತಕ ವಂಚಿತರಾದರು.
ಮತ್ತೆ ಮಿಚೆಲ್ ಮಿಂಚು:ಇತ್ತ ಬ್ರಿಟಿಷ್ ಬ್ಯಾಟರ್ಗಳು ರನ್ ಗುಡ್ಡೆ ಹಾಕುತ್ತಿದ್ದರೆ, ಆಸ್ಟೇಲಿಯಾದ ವೇಗಿ ಮಿಚೆಲ್ ಸ್ಟಾರ್ಕ್ 4 ವಿಕೆಟ್ ಕೆಡವಿದರು. ಮೊದಲ ಇನಿಂಗ್ಸ್ನಲ್ಲೂ ಇಷ್ಟೇ ವಿಕೆಟ್ ಪಡೆದು ಇಂಗ್ಲೆಂಡ್ ಕಟ್ಟಿಹಾಕಿದ್ದರು. ಇವರ ಜತೆಗೆ ಸ್ಪಿನ್ನರ್ ಟಾಡ್ ಮೊರ್ಫಿ 3 ವಿಕೆಟ್ ಪಡೆದರು.