ಲಾರ್ಡ್ಸ್ (ಲಂಡನ್): ಇಂಗ್ಲೆಂಡ್ - ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ಎರಡನೇ ಆ್ಯಶಸ್ ಟೆಸ್ಟ್‌ನ ಮೊದಲ ದಿನ ವಿಚಿತ್ರ ಘಟನೆಯೊಂದು ನಡೆಯಿತು. ಹವಾಮಾನ ಸಂರಕ್ಷಣೆಗೆ ಒತ್ತಾಯಿಸುತ್ತಿರುವ ಪ್ರತಿಭಟನಾಕಾರರು ಲಾರ್ಡ್ಸ್‌ನಲ್ಲಿ ಪಂದ್ಯಕ್ಕೆ ಅಡ್ಡಿಪಡಿಸಿದರು. ಇದರಿಂದ ಎರಡನೇ ಓವರ್ ನಡುವೆ ಪಂದ್ಯವನ್ನು ಐದು ನಿಮಿಷಗಳ ಕಾಲ ನಿಲ್ಲಸಬೇಕಾಯಿತು.
'ಜಸ್ಟ್ ಸ್ಟಾಪ್ ಆಯಿಲ್' ಶರ್ಟ್‌ಗಳನ್ನು ಧರಿಸಿದ್ದ ಇಬ್ಬರು ಪ್ರತಿಭಟನಾಕಾರರು ಕಿತ್ತಳೆ ಪುಡಿಯ ಚೀಲಗಳನ್ನು ಹಿಡಿದುಕೊಂಡು ಮೈದಾನದೊಳಗೆ ಓಡಿಬಂದರು. ಅವರ ಉದ್ದೇಶ ಪಿಚ್‌ಗೆ ಹಾನಿ ಮಾಡುವುದಾಗಿತ್ತು. ಮೈದಾನಕ್ಕೆ ಬಂದು ಕಿತ್ತಳೆ ಪುಡಿ ಎರಚಿದರೂ ಪಿಚ್‌ಗೆ ಹಾನಿ ಮಾಡದಂತೆ ತಡೆಯಲಾಯಿತು. ರಕ್ಷಣಾ ಸಿಬ್ಬಂದಿ ಬರುವ ಮುನ್ನವೇ ಕ್ರಿಕೆಟ್ ಆಟಗಾರರೇ ಅವರನ್ನು ತಡೆದರು.
ಇಂಗ್ಲೆಂಡ್ ವಿಕೆಟ್‌ಕೀಪರ್ ಕಮ್ ಬ್ಯಾಟರ್ ಜಾನಿ ಬೈರ್‌ಸ್ಟೋವ್ ಒಬ್ಬ ಕಾರ್ಯಕರ್ತನನ್ನು ತಮ್ಮ ಬಲಿಷ್ಠ ತೋಳುಗಳಿಂದ ಎತ್ತಿಕೊಂಡು ಹೋಗಿ ಬೌಂಡರಿ ಗೆರೆಯಿಂದ ಹೊರಗೆ ರಕ್ಷಣಾ ಸಿಬ್ಬಂದಿಗೆ ಒಪ್ಪಿಸಿದರು. ಡೇವಿಡ್ ವಾರ್ನರ್ ಎರಡನೇ ಪ್ರತಿಭಟನಾಕಾರರನ್ನು ತಡೆಯುವಲ್ಲಿ ಯಶಸ್ವಿಯಾದರು. ಪಿಚ್ನತ್ತ ಓಡಿ ಬಂದಿದ್ದ ಪ್ರತಿಭಟನಾಕಾರರನ್ನು ಅವರು ತಡೆದು ನಿಲ್ಲಿಸಿದರು. ಹೋರಾಟಗಾರರು ಎರಚಿದ್ದ ಕಿತ್ತಳೆ ಪುಡಿ ಬೈರ್‌ಸ್ಟೋವ್ ಅವರ ಮೈಗೆಲ್ಲ ಬಿದ್ದುದರಿಂದ ಅವರು ಜರ್ಸಿ ಬದಲಾಯಿಸಬೇಕಾಯಿತು.
ಮೂರನೇ ಪ್ರತಿಭಟನಾಕಾರ ಕೂಡ ಬೇಲಿ ಹಾರಿದ್ದ. ಆದರೆ ಪಿಚ್ ಕಡೆಗೆ ಬರುವ ಮೊದಲೇ ಹಗ್ಗದ ಬಳಿ ಇದ್ದ ರಕ್ಷಣಾ ಸಿಬ್ಬಂದಿ ಆತನನ್ನು ವಶಕ್ಕೆ ಪಡೆದರು. ಸ್ವಲ್ಪ ತಡವಾದ ನಂತರ ಪರಿಸ್ಥಿತಿ ಹತೋಟಿಗೆ ಬಂತು. ಮೂವರೂ ಪ್ರತಿಭಟನಾನಿರತರನ್ನು ರಕ್ಷಣಾ ಸಿಬ್ಬಂದಿ ಬಂಧಿಸಿದರು. ಈ ಪ್ರತಿಭಟನಾಕಾರರಿಂದಾಗಿ ಪಂದ್ಯವನ್ನು ಸ್ವಲ್ಪ ಹೊತ್ತು ನಿಲ್ಲಿಸಲಾಯಿತು. ಜಸ್ಟ್ ಸ್ಟಾಪ್ ಆಯಿಲ್ ಹೋರಾಟಗಾರರು ಎರಡಚಿದ ಕಿತ್ತಳೆ ಪುಡಿಯನ್ನು ಮೈದಾನದಿಂದ ತೆಗೆದ ನಂತರ ಪಂದ್ಯ ಮರು ಆರಂಭವಾಯಿತು.