ಮೆಲ್ಬೋರ್ನ್:ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಆ್ಯಶಸ್ ಟೆಸ್ಟ್ ಕ್ರಿಕೆಟ್ ಸರಣಿಗೆ ಮತ್ತೊಮ್ಮೆ ಕೋವಿಡ್ ಭೀತಿ ಎದುರಾಗಿದೆ. ಕಾಂಗರೂ ಪಡೆಯ ಮಧ್ಯಮ ಕ್ರಮಾಂಕದ ಬ್ಯಾಟರ್ ಟ್ರಾವಿಸ್ ಹೆಡ್ಗೆ ಕೊರೊನಾ ತಗುಲಿರುವುದು ದೃಢಪಟ್ಟಿದ್ದು, ಸಿಡ್ನಿ ಟೆಸ್ಟ್ ಪಂದ್ಯದಿಂದ ಹೊರಗುಳಿಯಲಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕ್ರಿಕೆಟ್ ಆಸ್ಟ್ರೇಲಿಯಾ, ಪಿಸಿಆರ್ ಪರೀಕ್ಷೆಯಲ್ಲಿ ಆಸ್ಟ್ರೇಲಿಯಾದ ಬ್ಯಾಟರ್ ಟ್ರಾವಿಸ್ ಹೆಡ್ಗೆ ಕೋವಿಡ್ -19 ಪಾಸಿಟಿವ್ ದೃಢಪಟ್ಟಿದೆ. ಮುಂಜಾಗ್ರತಾ ಕ್ರಮವಾಗಿ ಮಿಚೆಲ್ ಮಾರ್ಷ್, ನಿಕ್ ಮ್ಯಾಡಿನ್ಸನ್ ಮತ್ತು ಜೋಶ್ ಇಂಗ್ಲಿಸ್ ಅವರು ಹೆಚ್ಚುವರಿ ಆಟಗಾರರಾಗಿ ಆಸ್ಟ್ರೇಲಿಯಾ ತಂಡವನ್ನು ಸೇರಿಕೊಂಡಿದ್ದಾರೆ ಎಂದು ತಿಳಿಸಿದೆ.
ಈ ಹಿಂದೆ ಸರಣಿಯ ಮೆಲ್ಬೋರ್ನ್ ಟೆಸ್ಟ್ ಪಂದ್ಯದಲ್ಲೂ ಕೋವಿಡ್ ಭಯ ಆವರಿಸಿತ್ತು. ಪಂದ್ಯದ ಟೆಸ್ಟ್ ಪಂದ್ಯದ ಎರಡನೇ ದಿನದಾಟದ ಆರಂಭಕ್ಕೂ ಮುನ್ನ ಆಂಗ್ಲರ ಕ್ಯಾಂಪ್ನಲ್ಲಿ ನಾಲ್ವರಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿತ್ತು. ಆಂಗ್ಲರ ಕ್ಯಾಂಪ್ನ ಇಬ್ಬರು ಸಹಾಯಕ ಸಿಬ್ಬಂದಿ ಮತ್ತು ಇಬ್ಬರು ಕುಟುಂಬ ಸದಸ್ಯರಿಗೆ ಕೋವಿಡ್ ತಗುಲಿತ್ತು. ಬಳಿಕ ಸಕಲ ಮುನ್ನೆಚ್ಚರಿಕೆಯೊಂದಿಗೆ ಪಂದ್ಯವನ್ನು ನಡೆಸಲಾಗಿತ್ತು.
ಹೆಚ್ಚಿನ ಅಪಾಯ ತಪ್ಪಿಸುವ ನಿಟ್ಟಿನಲ್ಲಿ ಇಂಗ್ಲೆಂಡ್ ತಂಡವು ಪ್ರತ್ಯೇಕವಾಗಿ ಸಿಡ್ನಿಗೆ ಪ್ರಯಾಣಿಸುತ್ತಿದೆ. ತಮ್ಮ ಕುಟುಂಬದ ಸದಸ್ಯರೊಬ್ಬರಿಗೆ ಕೋವಿಡ್ ತಗುಲಿರುವ ಕಾರಣ ಇಂಗ್ಲೆಂಡ್ ತರಬೇತುದಾರ ಕ್ರಿಸ್ ಸಿಲ್ವರ್‌ವುಡ್ ಸಿಡ್ನಿ ಟೆಸ್ಟ್ ಸಂದರ್ಭದಲ್ಲಿ ತಂಡದಿಂದ ದೂರವಿರಲಿದ್ದಾರೆ. ಅವರು ಮೆಲ್ಬೋರ್ನ್‌ನಲ್ಲಿ ಪ್ರತ್ಯೇಕವಾಗಿ ಉಳಿದುಕೊಳ್ಳಲಿದ್ದಾರೆ. ಇದುವರೆಗೆ ಇಂಗ್ಲೆಂಡ್ ತಂಡದ ಸಿಬ್ಬಂದಿ ಸೇರಿ ಒಟ್ಟೂ 7 ಮಂದಿಗೆ ವೈರಸ್ ತಗುಲಿದೆ.