ಲೀಡ್ಸ್ (ಲಂಡನ್):ಹೆಡಿಂಗ್ಲಿಯಲ್ಲಿ ನಡೆಯುತ್ತಿರುವ 3ನೇ ಆ್ಯಶಸ್ ಟೆಸ್ಟ್‌ನ 4ನೇ ದಿನವಾದ ಇಂದು ಫಲಿತಾಂಶ ಕಾಣುವ ಎಲ್ಲ ಸಾಧ್ಯತೆಗಳಿವೆ. ಆದರೆ ಮಳೆ ಅಡ್ಡಿ ಮಾಡಿದಲ್ಲಿ ಮಾತ್ರ ಪಂದ್ಯ 5ನೇ ದಿನಕ್ಕೆ ಉಳಿಯಲಿದೆ. ಮೂರನೇ ಟೆಸ್ಟ್ ಸುಲಭವಾಗಿ ಗೆಲ್ಲುವ ಅವಕಾಶ ಇಂಗ್ಲೆಂಡ್ಗೆ ಇದೆ. ಆಸ್ಟ್ರೇಲಿಯಾ ಕೊಟ್ಟಿರುವ ಅಲ್ಪ ಮೊತ್ತದ ಗುರಿಯನ್ನು ಹೇಗೆ ರಕ್ಷಿಸಿಕೊಳ್ಳುತ್ತದೆ ಎಂಬುದು ಕುತೂಹಲ.
ಹವಾಮಾನ ಇಲಾಖೆಯ ವರದಿಯ ಪ್ರಕಾರ, ಇಂದು ಮಳೆಯಾಗುವ ಸಂಭವ ಹೆಚ್ಚು. ಆದರೆ ಆಗಾಗ್ಗೆ ವರುಣನ ಅಡ್ಡಿಯ ಆತಂಕ ಇದ್ದು ಬೆಕ್ಕು-ಇಲಿಯ ಆಟದಂತೆ ಮಳೆ ಪಂದ್ಯಕ್ಕೆ ಅಡ್ಡಿಪಡಿಸಬಹುದು ಎನ್ನಲಾಗಿದೆ. ಹವಾಮಾನ ಮತ್ತು ಪಿಚ್ ಯಾವ ತಂಡಕ್ಕೆ ಸಹಕಾರ ಒದಗಿಸಲಿದೆ ಎಂಬುದು ಪಂದ್ಯದ ಫಲಿತಾಂಶದಿಂದ ತಿಳಿದುಬರಲಿದೆ.
ಮೂರನೇ ದಿನದಾಟ ಮಳೆಯಿಂದಾಗಿ ತಡವಾಗಿ ಆರಂಭವಾಯಿತು. ಇದರಿಂದ ಇಂಗ್ಲೆಂಡ್ ಲಾಭಮಾಡಿಕೊಂಡಿತು ಎಂದರೆ ತಪ್ಪಾಗದು. ಆಸ್ಟ್ರೇಲಿಯಾದ 6 ವಿಕೆಟ್ ಅನ್ನು ವೇಗವಾಗಿ ಕಬಳಿಸಿದ ಇಂಗ್ಲೆಂಡ್ ಬೃಹತ್ ಗುರಿ ತಪ್ಪಿಸಿಕೊಂಡಿತು. ಆಸ್ಟ್ರೇಲಿಯಾ ಟ್ರಾವಿಸ್ ಹೆಡ್ ಅವರ ಬ್ಯಾಟಿಂಗ್ ಸಹಕಾರದಿಂದ ಸ್ಪರ್ಧಾತ್ಮಕ ಗುರಿಯನ್ನು ಒಟ್ಟು ಹಾಕುವಲ್ಲಿ ಯಶಕಂಡಿತು. ಮೂರನೇ ದಿನ ತಡವಾಗಿ ಆರಂಭವಾದ ಆಟದಲ್ಲಿ 128 ರನ್ ಗಳಿಸಿ 251 ರನ್ ಗುರಿಯನ್ನು ಇಂಗ್ಲೆಂಡ್ಗೆ ನೀಡಿತು.
ಎರಡನೇ ದಿನದಾಟದ ಅಂತ್ಯಕ್ಕೆ ಕಾಂಗರೂ ಪಡೆ 116 ರನ್ ಗಳಿಸಿ 4 ವಿಕೆಟ್ ಕಳೆದುಕೊಂಡಿತ್ತು. ಕ್ರೀಸ್ನಲ್ಲಿ ಮಿಚಲ್ ಮಾರ್ಷ್ (17) ಮತ್ತು ಟ್ರಾವೆಸ್ ಹೆಡ್ (18) ಇದ್ದರು. ಮೂರನೇ ದಿನದಾಟ ಆರಂಭವಾಗುತ್ತಿದ್ದಂತೆ 28 ರನ್ ಗಳಿಸಿದ ಮಾರ್ಷ್ ವಿಕೆಟ್ ಕೊಟ್ಟರು. ಅವರ ಬೆನ್ನಲ್ಲೇ ಅಲೆಕ್ಸ್ ಕ್ಯಾರಿ 5 ರನ್ಗೆ ಪೆವಿಲಿಯನ್ಗೆ ಮರಳಿದರು. ನಂತರ ಸ್ಟಾರ್ಕ್ ಹೆಡ್ಗೆ ಕೊಂಚ ಹೊತ್ತು ಜೊತೆಯಾಟ ಕೊಟ್ಟರು. ಆದರೆ 16 ರನ್ ಗಳಿಸಿ ವುಡ್ಗೆ ವಿಕೆಟ್ ಕೊಟ್ಟರು. ಇದರ ಬೆನ್ನಲ್ಲೇ ನಾಯುಕ ಕಮಿನ್ಸ್ 1ರನ್ಗೆ ಔಟ್ ಆದರು.
ಸತತ ವಿಕೆಟ್ ನಷ್ಟ ಕಂಡ ಹೆಡ್ ಬಿರುಸಿನ ಆಟಕ್ಕೆ ಮುಂದಾದರು. ಇಂಗ್ಲೆಂಡ್ನ ಬೇಸ್ಬಾಲ್ ನೀತಿಯನ್ನು ಅವರು ಅಳವಡಿಸಿಕೊಂಡು ಬೆನ್ ಸ್ಟೋಕ್ಸ್ ರೀತಿಯಲ್ಲಿ ಅಬ್ಬರದ ಇನ್ನಿಂಗ್ಸ್ ಕಟ್ಟಿದರು. 112 ಬಾಲ್ ಎದುರಿಸಿ 7 ಬೌಂಡರಿ ಮತ್ತು 3 ಸಿಕ್ಸ್ನ ಸಹಾಯದಿಂದ 77 ರನ್ ಕಲೆಹಾಕಿದರು. ಇವರ ಇನ್ನಿಂಗ್ಸ್ ನಡುವೆ ಬೌಲರ್ ಮಾರ್ಫಿಯೂ ವಿಕೆಟ್ ಕೊಟ್ಟಿದ್ದರು. ಆಸ್ಟ್ರೇಲಿಯಾ 250 ರನ್ಗಳ ಮುನ್ನಡೆ ಗಳಿಸುತ್ತಿದ್ದಂತೆ ಹೆಡ್ ವಿಕೆಟ್ ಪತನವಾಗಿದ್ದರಿಂದ 251 ರನ್ ಗುರಿ ಆಂಗ್ಲರಿಗೆ ದೊರೆಯಿತು.
ಮೂರನೇ ದಿನವೇ ಬ್ಯಾಟಿಂಗ್ಗೆ ಇಳಿದ ಆಂಗ್ಲರು 5 ಓವರ್ಗಳನ್ನು ಆಡಿದ್ದು, ವಿಕೆಟ್ ನಷ್ಟವಿಲ್ಲದೇ 27 ರನ್ ಕಲೆಹಾಕಿದ್ದಾರೆ. ಇಂದು ಪಂದ್ಯವನ್ನು ಗೆಲ್ಲಲು 224 ರನ್ ಅವಶ್ಯಕತೆ ಇದೆ. ಆಸ್ಟ್ರೇಲಿಯಾದ ಬೌಲರ್ಗಳು 224 ರನ್ ಗಳಿಸುವುದರ ಒಳಗೆ 10 ವಿಕೆಟ್ ಪಡೆಯಬೇಕಿದೆ.
ಇದನ್ನೂ ಓದಿ:India Vs West Indies: ಮೊದಲ ಟೆಸ್ಟ್ಗೆ ವೆಸ್ಟ್ ಇಂಡೀಸ್ನ ತಂಡ ಪ್ರಕಟ.. ಗಾಯಾಳುಗಳ ಸಮಸ್ಯೆಯಿಂದ ಹೊಸಬರಿಗೆ ಮಣೆ