ಎಡ್ಜ್‌ಬಾಸ್ಟನ್ (ಲಂಡನ್):ಆಸ್ಟ್ರೇಲಿಯಾದ ಕರಾರುವಾಕ್ ಬೌಲಿಂಗ್ ದಾಳಿಯ ಮುಂದೆ ಇಂಗ್ಲೆಂಡ್ನ ಬ್ಯಾಟರ್ಗಳಿಂದ ದೊಡ್ಡ ಇನ್ನಿಂಗ್ಸ್ ಕಟ್ಟುವ ಗುರಿ ಈಡೇರಲಿಲ್ಲ. ಏಷ್ಯಾ ರಾಷ್ಟ್ರಗಳ ಪಿಚ್ಗಳಲ್ಲಿ ಸ್ಪಿನ್ಗೆ ವಿಕೆಟ್ ಒಪ್ಪಿಸುವಂತೆ ನಾಥನ್ ಲಯಾನ್ ಅವರ ಬಿಗು ಬೌಲಿಂಗ್‌ಗೆ ಆಂಗ್ಲ ಬ್ಯಾಟರ್ಗಳು ವಿಕೆಟ್ ಒಪ್ಪಿಸಿದರು. ಇದರಿಂದ 273 ರನ್‌ಗಳಿಗೆ ಇಂಗ್ಲೆಂಡ್ ಎರಡನೇ ಇನ್ನಿಂಗ್ಸ್ನಲ್ಲಿ ಆಲೋಟ್ ಆಯಿತು. 5 ಪಂದ್ಯಗಳ ಪ್ರತಿಷ್ಟಿತ ಆ್ಯಶಸ್ ಟೂರ್ನಿಯ ಮೊದಲ ಟೆಸ್ಟ್ ಗೆಲುವಿಗೆ ಆಸ್ಟ್ರೇಲಿಯಾಗೆ 281 ರನ್ ಗುರಿ ಬೇಕಿದೆ. ನಾಲ್ಕು ಸೆಷನ್ಗಳು ಆಸ್ಟ್ರೇಲಿಯಾ ಜೊತೆಗಿದ್ದು, 120 ಓವರ್‌ಗಳಲ್ಲಿ ಈ ಗುರಿ ಸಾಧಿಸಬೇಕಿದೆ.
ಮೂರನೇ ದಿನದ ಕೊನೆಯ ಸೆಷನ್ ಬಾಕಿ ಇರುವಾಗ ಆಲೌಟಾದ ಆಸ್ಟ್ರೇಲಿಯಾ, ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ನಲ್ಲಿ ಗಳಿಸಿದ್ದ ಮೊತ್ತಕ್ಕಿಂತ 7 ರನ್ ಹಿನ್ನಡೆ ಅನುಭವಿಸಿತ್ತು. ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ಗೆ ನಿನ್ನೆಯೇ ಆರಂಭಿಕ ಆಘಾತ ಉಂಟಾಗಿತ್ತು. 19 ರನ್ ಗಳಿಸಿ ಬೆನ್ ಡಕೆಟ್ ವಿಕೆಟ್ ಕೊಟ್ಟಿದ್ದರು. 7 ರನ್ಗೆ ಝಾಕ್ ಕ್ರಾಲಿ ಸಹ ಪೆವಿಲಿಯನ್ಗೆ ಮರಳಿದ್ದರು. ಮೂರನೇ ದಿನದ ಕೊನೆಯ ಸೆಷನ್ ವೇಳೆ ಎರಡು ಬಾರಿ ಮಳೆ ಬಂದು ಪಂದ್ಯ ಸ್ಥಗಿತವಾದ ಕಾರಣ ಕೇವಲ 10 ಓವರ್ಗೆ ದಿನ ಅಂತ್ಯ ಮಾಡಲಾಯಿತು. ಈ ವೇಳೆಗೆ ಇಂಗ್ಲೆಂಡ್ ಎರಡು ವಿಕೆಟ್ ನಷ್ಟಕ್ಕೆ 28 ರನ್ ಗಳಿಸಿತ್ತು.
ನಾಲ್ಕನೇ ದಿನವಾದ ಇಂದು ಮೋಡದ ನಡುವೆ ಪಂದ್ಯ 15 ನಿಮಿಷ ತಡವಾಗಿಯೇ ಆರಂಭವಾಯಿತು. ಆದರೆ ನಂತರ ಮಳೆಯ ಭೀತಿ ದೂರಾಯಿತು. ಇಂಗ್ಲೆಂಡ್ಗೆ ಹೊಡಿಬಡಿ ದಾಂಡಿಗ ಬ್ರೆಂಡಮ್ ಮೆಕಲಮ್ ಕೋಚ್ ಮತ್ತು ಬೆನ್ ಸ್ಟೋಕ್ಸ್ ನಾಯಕನಾದ ನಂತರ ಏಕದಿನ ಮಾದರಿಯಲ್ಲಿ ತಂಡ ರನ್ ಕಲೆಹಾಕುತ್ತಿದೆ. ಮೊದಲ ಇನ್ನಿಂಗ್ಸ್ನಲ್ಲಿ ರೂಟ್ ಸ್ವಲ್ಪ ನಿಧಾನಗತಿಯಲ್ಲಿ ಬ್ಯಾಟ್ ಬೀಸಿದ್ದು ಬಿಟ್ಟರೆ ಮಿಕ್ಕವರೆಲ್ಲ ಹೊಡಿಬಡಿ ಆಟವನ್ನೇ ಪ್ರದರ್ಶಿಸಿದ್ದರು.