ಲೀಡ್ಸ್:ಯುವ ಬ್ಯಾಟರ್ ಹ್ಯಾರಿ ಬ್ರೂಕ್ ಆಕರ್ಷಕ ಅರ್ಧಶತಕ (75) ಹಾಗೂ ಆಲ್ರೌಂಡರ್ ಕ್ರಿಸ್ ವೋಕ್ಸ್ (32) ಅಜೇಯ ಆಟದ ನೆರವಿನಿಂದ ಆಸ್ಟ್ರೇಲಿಯಾ ವಿರುದ್ದ ಇಂಗ್ಲೆಂಡ್ ತಂಡವು 3 ವಿಕೆಟ್ಗಳ ಗೆಲುವು ದಾಖಲಿಸಿದೆ. ಇದರೊಂದಿಗೆ ಈ ಬಾರಿಯ ಆ್ಯಶಸ್ ಸರಣಿಯಲ್ಲಿ ಮೊದಲ ಜಯ ದಾಖಲಿಸಿದ್ದು, 1-2ರ ಅಂತರ ಸಾಧಿಸಿದೆ.
251 ರನ್ ಗೆಲುವಿನ ಗುರಿ ಪಡೆದ ಇಂಗ್ಲೆಂಡ್ ಮೂರನೇ ದಿನದಾಟದ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 27 ರನ್ ಗಳಿಸಿತ್ತು. ಹೀಗಾಗಿ ಆಂಗ್ಲರ ಗೆಲುವಿಗೆ ಇನ್ನೂ 224 ರನ್ ಅಗತ್ಯವಿತ್ತು. ನಾಲ್ಕನೇ ದಿನದಾಟ ಆರಂಭಿಸಿದ ಇಂಗ್ಲೆಂಡ್ಗೆ ವೇಗಿ ಮಿಚೆಲ್ ಸ್ಟಾರ್ಕ್ ಮೊದಲ ವಿಕೆಟ್ ಕಿತ್ತು ಶಾಕ್ ನೀಡಿದರು. 23 ರನ್ ಗಳಿಸಿದ್ದ ಬೆನ್ ಡಕೆಟ್ ಎಲ್ಬಿಡಬ್ಲ್ಯೂ ಬಲೆಗೆ ಬಿದ್ದರು. ಬಳಿಕ ಬಂದ ಮೋಯಿನ್ ಅಲಿ ಕೂಡ ಕೇವಲ 5 ರನ್ಗೆ ಸ್ಟಾರ್ಕ್ ಎಸೆತದಲ್ಲಿ ಬೌಲ್ಡ್ ಆದರು.
ನಂತರ ಮತ್ತೊಬ್ಬ ಆರಂಭಿಕ ಆಟಗಾರ ಜಾಕ್ ಕ್ರಾವ್ಲಿ ಜೊತೆಗೂಡಿದ ಅನುಭವಿ ಆಟಗಾರ ಜೋ ರೂಟ್ ಉತ್ತಮ ಜೊತೆಯಾಟದ ಭರವಸೆ ಮೂಡಿಸಿದ್ದರು. ಆದರೆ 44 ರನ್ ಬಾರಿಸಿದ್ದ ಕ್ರಾವ್ಲಿ ಮಿಚೆಲ್ ಮಾರ್ಷ್ ಬೌಲಿಂಗ್ನಲ್ಲಿ ವಿಕೆಟ್ ಕೀಪರ್ ಅಲೆಕ್ಸ್ ಕ್ಯಾರಿಗೆ ಕ್ಯಾಚ್ ನೀಡಿ ಹೊರ ನಡೆದರು. ತದನಂತರ ಹ್ಯಾರಿ ಬ್ರೂಕ್ ಜೊತೆ ಸೇರಿಕೊಂಡು ತಂಡದ ಮೊತ್ತವನ್ನು 131ಕ್ಕೆ ಕೊಂಡೊಯ್ದ ರೂಟ್ ಕಮಿನ್ಸ್ ಎಸೆತದಲ್ಲಿ ಔಟಾಗುವ ಮೂಲಕ ಆಸೀಸ್ಗೆ ಗೆಲುವಿನ ಆಸೆ ಚಿಗುರಿತ್ತು. ಈ ನಡುವೆ 13 ರನ್ ಬಾರಿಸಿದ್ದ ನಾಯಕ ಬೆನ್ ಸ್ಟೋಕ್ಸ್ ಕೂಡ ಸ್ಟಾರ್ಕ್ ಓವರ್ನಲ್ಲಿ ಕ್ಯಾರಿಗೆ ಕ್ಯಾಚಿತ್ತು ಹೊರನಡೆದರು. ಅಲ್ಲದೆ, ಜಾನಿ ಬೈರ್ಸ್ಟೋ ಕೂಡ 5 ರನ್ಗೆ ಪೆವಿಲಿಯನ್ ಸೇರಿದ್ದರಿಂದ ಇಂಗ್ಲೆಂಡ್ 171 ರನ್ಗೆ 6 ವಿಕೆಟ್ ಕಳೆದುಕೊಂಡಿದ್ದಲ್ಲದೆ, ಆಸೀಸ್ ಆಟಗಾರರಿಗೆ ಗೆಲುವಿನ ವಿಶ್ವಾಸ ಮೂಡಿತ್ತು.