ಅನಂತನಾಗ್ (ಜಮ್ಮು ಕಾಶ್ಮೀರ): ಏಕದಿನ ಕ್ರಿಕೆಟ್ ಹಬ್ಬಕ್ಕೆ ಕ್ಷಣಗಣನೆ ಆರಂಭವಾಗಿದೆ. ಮೊದಲ ಬಾರಿಗೆ ಭಾರತದಲ್ಲಿ ವಿಶ್ವಕಪ್ ನಡೆಯುತ್ತಿದೆ. ಎಲ್ಲ 10 ತಂಡಗಳು ಭಾರತಕ್ಕೆ ಬಂದಿಳಿದಿದ್ದು, ಇಂದಿನಿಂದ ಅಭ್ಯಾಸ ಪಂದ್ಯಗಳು ಆರಂಭವಾಗಿದೆ. ವಿಶ್ವಕಪ್ ರೀತಿಯ ಕ್ರೀಡಾ ಹಬ್ಬ ನಡೆಯುವಾಗ ಆಟಗಾರರು ಮಾತ್ರ ಹಣ ಮಾಡುವುದಲ್ಲ, ಇದರಿಂದ ಅನೇಕ ವಿಭಾಗಗಳು ಆರ್ಥಿಕವಾಗಿ ಚೇತರಿಸಿಕೊಳ್ಳುತ್ತವೆ. ಕ್ರಿಕೆಟ್ ಎಂದ ಮೇಲೆ ಬ್ಯಾಟ್ - ಬಾಲಿನ ಕದನವಾಗಿದ್ದು, ಈಗ ವಿಶ್ವಕಪ್ ಹಿನ್ನೆಲೆಯಲ್ಲಿ ಕಾಶ್ಮೀರದ ವಿಶೇಷ ಮರದ ಬ್ಯಾಟ್ಗಳಿಗೆ ಬೇಡಿಕೆ ಹೆಚ್ಚಾಗಿದೆ.
ಉತ್ತರ ಪ್ರದೇಶದ ಮೀರತ್‌ನ ಸುನೀಲ್ ಕುಮಾರ್ ಬ್ಯಾಟ್‌ಗಳ ತಯಾರಿಕೆಯಲ್ಲಿ ಪರಿಣತಿ ಹೊಂದಿದ್ದು, ಇವರು ತಯಾರಿಸುವ ಬ್ಯಾಟ್ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೇಡಿಕೆಗಳು ಇದೆ. 12 ವರ್ಷಗಳ ನಂತರ ವಿಶ್ವಕಪ್ ಭಾರತದಲ್ಲಿ ನಡೆಯುತ್ತಿದ್ದು, ಹೀಗಾಗಿ ಪೂರೈಕೆ ಮಾಡಲಾಗದಷ್ಟು ಬೇಡಿಕೆ ಬರುತ್ತಿದೆಯಂತೆ . ಇಷ್ಟು ಬೇಡಿಕೆ ಬರಲು ಒಂದು ಸುನೀಲ್ ಕುಮಾರ್ ಅವರ ಕೈಚಳಕ ಕಾರಣವಾದರೆ, ಇನ್ನೊಂದೆಡೆ ಕಾಶ್ಮೀರದಲ್ಲಿ ಸಿಗುವ ವಿಲೋ ಜಾತಿಯ ವಿಶೇಷ ಮರ ಈ ಬೇಡಿಕೆಗೆ ಬಹುಮುಖ್ಯ ಕಾರಣವಾಗಿದೆ. ವಿಲೋ ಮರದಿಂದ ತಯಾರಾಗುವ ಬ್ಯಾಟ್‌ಗಳು ಆಟಕ್ಕೆ ಹೆಚ್ಚು ಸೂಕ್ತವಾಗಿದ್ದು, 2021ರಲ್ಲಿ ಐಸಿಸಿ ಮಾನ್ಯತೆ ಪಡೆದುಕೊಂಡಿದೆ. ಇದಾದ ನಂತರ ವಿಲೋ ಮರಗಳ ಬ್ಯಾಟ್ಗಳಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯೂ ವೃದ್ಧಿಸಿದೆ.
ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಆಯೋಜಿಸುವ ಪ್ರತಿಷ್ಠಿತ ಈವೆಂಟ್ಗಳಿಗೆ ಮುನ್ನ ಕಾಶ್ಮೀರದ ವಿಲೋದಿಂದ ತಯಾರಿಸಿದ ಬ್ಯಾಟ್‌ಗಳ ಮಾರಾಟವು ಏರಿಕೆ ಕಂಡಿದೆ."ಕ್ರಿಕೆಟ್ ವಿಶ್ವಕಪ್ ಸಮೀಪಿಸುತ್ತಿರುವುದರಿಂದ, ಬ್ಯಾಟ್‌ಗಳ ಬೇಡಿಕೆಯಲ್ಲೂ ಭಾರಿ ಹೆಚ್ಚಳ ಕಂಡು ಬಂದಿದೆ. ಎಲ್ಲ ಆರ್ಡರ್‌ಗಳನ್ನು ಪೂರ್ಣಗೊಳಿಸಲು ನಮಗೆ ಸಾಧ್ಯವಾಗುತ್ತಿಲ್ಲ. ಬ್ಯಾಟ್‌ಗಳನ್ನು ಮಾಡುವುದರಲ್ಲಿ ನಾನು 20 ವರ್ಷಗಳ ಅನುಭವ ಹೊಂದಿದ್ದೇನೆ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ಆ್ಯಂಡ್ರೆ ರಸೆಲ್ ಮತ್ತು ಡ್ವೇನ್ ಬ್ರಾವೋ ಅವರಂತಹ ಸ್ಟಾರ್ ಕ್ರಿಕೆಟಿಗರಿಗೆ ನಾನು ಬ್ಯಾಟ್‌ಗಳನ್ನು ತಯಾರಿಸಿದ್ದೇನೆ"ಎಂದು ಕುಮಾರ್ ಹೇಳಿದ್ದಾರೆ.