ಮುಂಬೈ: ಲೆಜೆಂಡರಿ ಕ್ರಿಕೆಟರ್ ಸಚಿನ್ ತೆಂಡೂಲ್ಕರ್ ಮಗ ಅರ್ಜುನ್ ತೆಂಡೂಲ್ಕರ್ ಮತ್ತು ಫಾರ್ಮ್ ಕಂಡುಕೊಳ್ಳಲು ಎದುರು ನೋಡುತ್ತಿರುವ ಭಾರತ ತಂಡದ ಬ್ಯಾಟರ್ ಅಜಿಂಕ್ಯ ರಹಾನೆ ಮುಂಬೈ ರಣಜಿ ಟ್ರೋಫಿ ತಂಡದಲ್ಲಿ ಅವಕಾಶ ಪಡೆದುಕೊಂಡಿದ್ದಾರೆ.
ಕಳೆದ ವರ್ಷ ವಿಜಯ್ ಹಜಾರೆ ಟ್ರೋಫಿಯಲ್ಲಿ ತಂಡವನ್ನು ಮುನ್ನಡೆಸಿ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದ ಪೃಥ್ವಿ ಶಾ ಈ ಬಾರಿ ರಣಜಿ ತಂಡವನ್ನು ಮುನ್ನಡೆಸಲಿದ್ದಾರೆ. ಭಾರತ ತಂಡದಿಂದ ಹೊರ ಬೀಳುವ ಆತಂಕ ಎದುರಿಸುತ್ತಿರುವ ರಹಾನೆ ರಣಜಿ ಟ್ರೋಫಿ ಫಾರ್ಮ್ಗೆ ಮರಳಿ ತನ್ನ ಸ್ಥಾನ ಭದ್ರಪಡಿಸಿಕೊಳ್ಳುವುದಕ್ಕೆ ಉತ್ತಮ ಅವಕಾಶ ಸಿಕ್ಕಂತಾಗಿದೆ.
ಇನ್ನು ಅರ್ಜುನ್ ತೆಂಡೂಲ್ಕರ್ ಕಳೆದ ವರ್ಷದ ತಂಡದಲ್ಲೂ ಅವಕಾಶ ಪಡೆದಿದ್ದಾರೆ, ಟೂರ್ನಿ ನಡೆಯದ ಕಾರಣ ದೇಶಿ ಕ್ರಿಕೆಟ್ನ ರಾಜಾ ಎಂದೇ ಬಿಂಬಿತವಾಗಿರುವ ರಣಜಿಯಲ್ಲಿ ಪದಾರ್ಪಣೆ ಮಾಡಿರಲಿಲ್ಲ. ಈ ವರ್ಷ ಮತ್ತೆ ಅವಕಾಶ ಪಡೆದುಕೊಂಡಿದ್ದಾರೆ.
ಎಂಸಿಎ ಹಿರಿಯ ಆಯ್ಕೆ ಸಮಿತಿ ಅಧ್ಯಕ್ಷ ಸಲಿಲ್ ಅಂಕೋಲಾ, ಗುಲಮ್ ಪಾರ್ಕರ್, ಸುನಿಲ್ ಮೋರೆ, ಪ್ರಸಾದ್ ದೇಸಾಯಿ ಮತ್ತು ಆನಂದ್ ಯಲ್ವಿಗಿ ಮುಂಬರುವ ರಣಜಿ ಟ್ರೋಫಿಗಾಗಿ ಮುಂಬೈ ತಂಡವನ್ನು ಆಯ್ಕೆ ಮಾಡಿದ್ದಾರೆ ಎಂದು ಎಂಸಿಎ ತಂಡದ ಜೊತೆ ಹೇಳಿಕೆ ಬಿಡುಗಡೆ ಮಾಡಿದೆ.