ಲಂಡನ್:ಶುಕ್ರವಾರ ಇಂಗ್ಲೆಂಡ್ ತಂಡದ ವೇಗದ ಬೌಲರ್ ಜೋಫ್ರಾ ಆರ್ಚರ್ ಮೊಣಕೈ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ. ಹಾಗಾಗಿ ಆಗಸ್ಟ್ 4ರಿಂದ ಆರಂಭವಾಗಲಿರುವ ಭಾರತದ ವಿರುದ್ಧದ ಟೆಸ್ಟ್ ಸರಣಿಯ ಕೆಲವು ಪಂದ್ಯಗಳನ್ನು ತಪ್ಪಿಸಿಕೊಳ್ಳಬಹುದು ಎನ್ನಲಾಗುತ್ತಿದೆ.
ಆರ್ಚರ್ ಈಗಾಗಲೇ ಪ್ರವಾಸಿ ನ್ಯೂಜಿಲ್ಯಾಂಡ್ ವಿರುದ್ದ ಜೂನ್ 2ರಿಂದ ಆರಂಭವಾಗಲಿರುವ 2 ಪಂದ್ಯಗಳ ಟೆಸ್ಟ್ ಸರಣಿಯಿಂದ ಹೊರಬಿದ್ದಿದ್ದಾರೆ. ಇದೀಗ ಈ ವರ್ಷದ 2ನೇ ಸರ್ಜರಿಗೆ ಒಳಗಾಗುವುದರಿಂದ ಮುಂದಿನ ಸರಣಿಯನ್ನು ಮಿಸ್ ಮಾಡಿಕೊಳ್ಳುವ ಸಾಧ್ಯತೆಯಿದೆ.
" ಜೋಫ್ರಾ ಅವರ ಬಲ ಮೊಣಕೈ ನೋವಿಗೆ ಸಂಬಂಧಿಸಿದಂತೆ ವೈದ್ಯಕೀಯ ಸಲಹೆಗಾರರಿಂದ ಪರಿಶೀಲಿಸಲಾಗಿದೆ. ಅವರು ನಾಳೆ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ" ಎಂದು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಟ್ವೀಟ್ ಮೂಲಕ ತಿಳಿಸಿದೆ.
ಆರ್ಚರ್ ಬಗೆಗಿನ ಹೆಚ್ಚಿನ ಅಪ್ಡೇಟ್ಗಳನ್ನು ಸರಿಯಾದ ಸಮಯದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಇಸಿಬಿ ಹೇಳಿದೆ. ಆದರೆ, ಪುನರಾಗಮನ ಮಾಡಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂಬುದನ್ನು ನಿರ್ದಿಷ್ಟಪಡಿಸಿಲ್ಲ.
ಭಾರತದ ವಿರುದ್ಧದ ಟಿ-20 ಸರಣಿ ಸೇರಿದಂತೆ ಈ ಹಿಂದೆ ನೋವಿನಿಂದ ಬಳಲುತ್ತಿದ್ದ ಸಮಯದಲ್ಲಿ ಆರ್ಚರ್ ಮೊಣಕೈ (ಎಲ್ಬೋ ಜಾಯಿಂಟ್)ಗೆ ಕಾರ್ಟಿಸೈನ್ ಇಂಜೆಕ್ಷನ್ ನೀಡಲಾಗಿತ್ತು ಎಂದು ಸ್ಕೈ ಸ್ಪೋರ್ಟ್ಸ್ ವರದಿ ಮಾಡಿದೆ.
ಆರ್ಚರ್ ಬಲ ಗೈ ಶಸ್ತ್ರಚಿಕಿತ್ಸೆಯ ನಂತರ ಸಸೆಕ್ಸ್ ಪರ ಕೌಂಟಿ ಚಾಂಪಿಯನ್ಶಿಪ್ನಲ್ಲಿ ಪುನಾರಂಭ ಮಾಡಿದ್ದರು. ಆದರೆ ಪಂದ್ಯದ ನಡುವೆ ಮೊಣಕೈ ನೋವು ಕಾಣಿಸಿಕೊಂಡ ಹಿನ್ನೆಲೆ ವೈದ್ಯರು ಅವರಿ ಶಸ್ತ್ರಚಿಕಿತ್ಸೆಗೆ ಸಲಹೆ ಮಾಡಿದ್ದರು.
ಇದನ್ನು ಓದಿ: ಆತನ ಗಾಯದ ಮರುಕಳುಹಿಸುವಿಕೆ ಇಂಗ್ಲೆಂಡ್ ತಂಡಕ್ಕೆ ದೊಡ್ಡ ಆತಂಕ : ನಾಸಿರ್ ಹುಸೇನ್