ಮುಂಬೈ: ಏಪ್ರಿಲ್ 23 ಐಪಿಎಲ್ ಇತಿಹಾಸದಲ್ಲಿ ನೆನಪಿನಲ್ಲಿ ಉಳಿಯುವ ದಿನ. ಹಾಗೆಯೇ ಆರ್ಸಿಬಿಗೂ ಕೂಡ. ಇದೇ ದಿನ 2013ರಲ್ಲಿ 263 ರನ್ಗಳ ಐಪಿಎಲ್ ಇತಿಹಾಸದ ಗರಿಷ್ಠ ರನ್ ಸಿಡಿಸಿದ ಬೆಂಗಳೂರು ತಂಡ, 4 ವರ್ಷಗಳ ನಂತರ 2017ರಲ್ಲಿ ಕೇವಲ 49 ರನ್ಗಳಿಗೆ ಆಲೌಟ್ ಆಗುವ ಮೂಲಕ ಶ್ರೀಮಂತ ಲೀಗ್ನಲ್ಲಿ ಕಳಪೆ ಮೊತ್ತ ದಾಖಲಿಸಿದ ಕುಖ್ಯಾತಿಗೂ ಒಳಗಾಗಿತ್ತು.
2013ರಲ್ಲಿ ಬೆಂಗಳೂರಿನ ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪುಣೆ ವಾರಿಯರ್ಸ್ ವಿರುದ್ಧ ಆರ್ಸಿಬಿ 5 ವಿಕೆಟ್ ಕಳೆದುಕೊಂಡು 263 ರನ್ಗಳಿಸಿತ್ತು. ಈ ಪಂದ್ಯದಲ್ಲಿ ಕ್ರಿಸ್ ಗೇಲ್ ಅಜೇಯ 175 ರನ್ಗಳಿಸಿದ್ದರು. ಈ ಪಂದ್ಯವನ್ನು ಆರ್ಸಿಬಿ 130 ರನ್ಗಳಿಂದ ಗೆದ್ದು ಬೀಗಿತ್ತು.
ಕಾಕತಾಳೀಯ ಎಂದರೆ ಇದೇ ದಿನ 2017ರಲ್ಲಿ ಆರ್ಸಿಬಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 132 ರನ್ಗಳನ್ನು ಬೆನ್ನಟ್ಟಲಾಗದೇ ಕೇವಲ 49 ರನ್ಗಳಿಗೆ ಆಲೌಟ್ ಆಗಿತ್ತು. ದುರಾದೃಷ್ಟವೆಂದರೆ ಈ ಪಂದ್ಯದಲ್ಲಿ ತಂಡದ ಯಾವೊಬ್ಬ ಬ್ಯಾಟರ್ ಕೂಡಾ ಎರಡಂಕಿ ಮೊತ್ತ ದಾಟಿರಲಿಲ್ಲ. ತಂಡದ ಗರಿಷ್ಠ ಮೊತ್ತವೆಂದರೆ ಕೇದರ್ ಜಾಧವ್ರ 9 ರನ್. ಆ ಪಂದ್ಯದಲ್ಲಿ ಕ್ರಿಸ್ ವೋಕ್ಸ್ 6ಕ್ಕೆ3, ಗ್ರ್ಯಾಂಡ್ಹೋಮ್ 4ಕ್ಕೆ3 ಮತ್ತು ನೇತನ್ ಕೌಲ್ಟರ್ ನೈಲ್ 21ಕ್ಕೆ3 ಮತ್ತು ಉಮೇಶ್ ಯಾದವ್ 15ಕ್ಕೆ1 ವಿಕೆಟ್ ಪಡೆದಿದ್ದರು.
ಮತ್ತದೇ ಕಾರಳ ನೆನಪು:ಏಪ್ರಿಲ್ 23 ಸಿಹಿ-ಕಹಿ ಅನುಭವ ಹೊಂದಿದ್ದ ಆರ್ಸಿಬಿಗೆ ಈ ವರ್ಷ ಮತ್ತೆ ಕರಾಳ ದಿನವಾಗಿದೆ. ಮುಂಬೈನ ಬ್ರೆಬೋರ್ನ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಕೇವಲ 68 ರನ್ಗಳಿಗೆ ಆಲೌಟ್ ಆಗಿದೆ. ಅಂದು ನಾಯಕನಾಗಿದ್ದ ವಿರಾಟ್ ಕೊಹ್ಲಿ 2017ರಲ್ಲಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದರು, ಇಂದು ಕೂಡ ಶೂನ್ಯಕ್ಕೆ ಔಟಾದರು.
ಇದನ್ನೂ ಓದಿ:7 ಪಂದ್ಯಗಳಿಗೆ 491ರನ್! ಕೊಹ್ಲಿಯ 2016ರ ದಾಖಲೆಯತ್ತ ಬಟ್ಲರ್ ಓಟ