ಬೆಂಗಳೂರು: ಪ್ರಶಸ್ತಿಗಾಗಿ ಪ್ರತೀ ವರ್ಷ ಪರಿತಪಿಸುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡ ಮುಂದಿನ ಇಂಡಿಯನ್ ಪ್ರೀಮಿಯರ್ ಲೀಗ್ ಆವೃತ್ತಿಗೆ ತಂಡದಲ್ಲಿ ಮೇಜರ್ ಸರ್ಜರಿಯನ್ನು ಮಾಡಿದೆ. ಈ ಹಿಂದೆಯೇ ಕೋಚ್ ಸಂಜಯ್ ಬಂಗಾರ್ ಅವರನ್ನು ಕೈ ಬಿಟ್ಟಿರುವುದು ಎಲ್ಲರಿಗೂ ತಿಳಿದ ವಿಚಾರವಾಗಿದೆ. ಅವರ ಜೊತೆ ಮೈಕ್ ಹೆಸ್ಸನ್ ಅವರನ್ನು ಕೈಬಿಡಲಾಗಿತ್ತು. ಈಗ ಸಂಜಯ್ ಬಂಗಾರು ಅವರ ಜಾಗಕ್ಕೆ ನೂತನ ಕೋಚ್ನ ನೇಮಕವಾಗಿದ್ದು, ಮುಂದಿನ ಬಾರಿ ಐಪಿಎಲ್ನಲ್ಲಿ ಆರ್ಸಿಬಿ ತಂಡದಿಂದ ಹೊಸ ನಿರೀಕ್ಷೆಗಳು ತಂಡದ ಅಭಿಮಾನಿಗಳಲ್ಲಿ ಹುಟ್ಟಿಸಿದೆ.
ಮುಂದಿನ ವರ್ಷದ ಇಂಡಿಯನ್ ಪ್ರೀಮಿಯರ್ ಲೀಗ್ ಆವೃತ್ತಿಗೆ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪುರುಷರ ತಂಡದ ಮುಖ್ಯ ಕೋಚ್ ಆಗಿ ಆಂಡಿ ಫ್ಲವರ್ ನೇಮಕಗೊಂಡಿದ್ದಾರೆ. 2023 ರ ಐಪಿಎಲ್ ವರೆಗೆ ಫ್ರಾಂಚೈಸಿಯ ಮುಖ್ಯ ಕೋಚ್ ಆಗಿದ್ದ ಸಂಜಯ್ ಬಂಗಾರ್ ಅವರಿಂದ ಫ್ಲವರ್ ಅಧಿಕಾರ ವಹಿಸಿಕೊಳ್ಳಲಿದ್ದಾರೆ. 16ನೇ ಐಪಿಎಲ್ ಆವೃತ್ತಿಯ ನಂತರ ಆರ್ಸಿಬಿ ತಂಡದ ಆಂತರಿಕ ಪರಿಶೀಲನೆಯ ಭಾಗವಾಗಿ ಬಂಗಾರ ಹೊರತುಪಡಿಸಿ, ಕ್ರಿಕೆಟ್ ಕಾರ್ಯಾಚರಣೆಯ ನಿರ್ದೇಶಕರಾಗಿದ್ದ ಮೈಕ್ ಹೆಸ್ಸನ್ ಅವರ ಒಪ್ಪಂದವನ್ನು ಅವರು ನವೀಕರಿಸುತ್ತಿಲ್ಲ ಎಂದು ಫ್ರಾಂಚೈಸ್ ದೃಢಪಡಿಸಿತ್ತು.
"ನಾನು ಗೌರವಿಸುವ ಇಬ್ಬರು ತರಬೇತುದಾರರಾದ ಮೈಕ್ ಹೆಸ್ಸನ್ ಮತ್ತು ಸಂಜಯ್ ಬಂಗಾರ್ ಅವರ ಕೆಲಸವನ್ನು ನಾನು ಗುರುತಿಸುತ್ತೇನೆ ಮತ್ತು ಆರ್ಸಿಬಿ ಅನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ಸವಾಲನ್ನು ನಾನು ಎದುರು ನೋಡುತ್ತಿದ್ದೇನೆ. ಫಾಫ್ ಜೊತೆ ಮತ್ತೆ ಒಂದಾಗಲು ನಾನು ವಿಶೇಷವಾಗಿ ಉತ್ಸುಕನಾಗಿದ್ದೇನೆ. ನಾವು ಈ ಹಿಂದೆ ಚೆನ್ನಾಗಿ ಕೆಲಸ ಮಾಡಿದ್ದೇವೆ ಮತ್ತು ನಮ್ಮ ಪಾಲುದಾರಿಕೆ, ಸಂಬಂಧವನ್ನು ದೊಡ್ಡದಾದ ಮತ್ತು ಉತ್ತಮವಾದ ರೀತಿಯಲ್ಲಿ ರೂಪಿಸಲು ನಾನು ಎದುರು ನೋಡುತ್ತಿದ್ದೇನೆ" ಎಂದು ಫ್ಲವರ್ ಆರ್‌ಸಿಬಿಯ ಮುಖ್ಯ ಕೋಚ್ ಆಗಿ ನೇಮಕಗೊಂಡ ಬಗ್ಗೆ ಹೇಳಿದರು.
"ನಾವು ಕೆಲಸ ಮಾಡಲು ಅತ್ಯಾಕರ್ಷಕ ಆಟಗಾರರ ಪಟ್ಟಿಯನ್ನು ಹೊಂದಿದ್ದೇವೆ ಮತ್ತು ಆರ್ಸಿಬಿಯೊಂದಿಗಿನ ಅದ್ಭುತ ಅವಕಾಶವನ್ನು ನಾನು ಗುರುತಿಸುತ್ತೇನೆ ಮತ್ತು ಆನಂದಿಸುತ್ತೇನೆ. ಆದರೆ ಕೋಚ್ ಆಗಿ ಬರುವ ಜವಾಬ್ದಾರಿಯನ್ನೂ ಸಹ ಅನುಭವಿಸುತ್ತೇನೆ. ಇದು ಒಂದು ದೊಡ್ಡ ಸವಾಲು ಇದಕ್ಕಾಗಿ ನಾನು ಸಿದ್ಧವಿದ್ದೇನೆ" ಎಂದು ಫ್ಲವರ್ ತಿಳಿಸಿದ್ದಾರೆ.