ಮುಂಬೈ: ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಬುಧವಾರ ನಡೆದಿದ್ದ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ 18 ರನ್ಗಳಿಂದ ಸೋಲು ಕಂಡಿತ್ತು. ಆದರೆ ಆ ಪಂದ್ಯದಲ್ಲಿ ಕೇವಲ 31 ರನ್ಗಳಿಗೆ 5 ವಿಕೆಟ್ ಕಳೆದುಕೊಂಡಿದ್ದ ಕೆಕೆಆರ್ 202 ರನ್ ಗಳಿಸಿ ಪ್ರಬಲ ಪೈಪೋಟಿ ನೀಡಿತ್ತು.
ಮೊದಲು ಬ್ಯಾಟಿಂಗ್ ಮಾಡಿದ್ದ ಸಿಎಸ್ಕೆ ಡುಪ್ಲೆಸಿಸ್(95) ಮತ್ತು ರುತುರಾಜ್ ಗಾಯಕ್ವಾಡ್(64) ಅರ್ಧಶತಕದ ನೆರವಿನಿಂದ 220 ರನ್ ಗಳಿಸಿತ್ತು. ಈ ಮೊತ್ತವನ್ನು ಬೆನ್ನತ್ತಿದ ಕೆಕೆಆರ್ 31 ರನ್ಗಳಿಗೆ 5 ವಿಕೆಟ್ ಕಳೆದುಕೊಂಡಿತ್ತು. ಆದರೆ ಈ ಹಂತದಲ್ಲಿ ಕೆಚ್ಛೆದೆಯ ಪ್ರದರ್ಶನ ತೋರಿದ್ದ ರಸೆಲ್ 22 ಎಸೆತಗಳಲ್ಲಿ 54, ದಿನೇಶ್ ಕಾರ್ತಿಕ್ 24 ಎಸೆತಗಳಲ್ಲಿ 40 ಮತ್ತು ಪ್ಯಾಟ್ ಕಮ್ಮಿನ್ಸ್ 34 ಎಸೆತಗಳಲ್ಲಿ 66 ರನ್ ಗಳಿಸಿ ಸೋಲಿನಲ್ಲೂ ಪ್ರತಿರೋಧ ತೋರಿದ್ದರು.
ಈ ಪಂದ್ಯದಲ್ಲಿ ಸ್ಯಾಮ್ ಕರ್ರನ್ ಬೌಲಿಂಗ್ನಲ್ಲಿ ರಸೆಲ್ ಬೌಲ್ಡ್ ಆಗಿದ್ದರು. ಸೋಲುವ ಪಂದ್ಯವನ್ನು ಗೆಲುವಿನತ್ತ ತಿರುಗಿಸಿದ್ದ ಅವರು ಕರ್ರನ್ ಬೌಲಿಂಗ್ನಲ್ಲಿ ಲೆಗ್ಸೈಡ್ ಚೆಂಡನ್ನು ಆಡಲಾಗದೆ ಬೌಲ್ಡ್ ಆಗಿದ್ದರು. ಇದೇ ಕಾರಣದಿಂದ ತಮ್ಮ ಡ್ರೆಸ್ಸಿಂಗ್ ರೂಮ್ಗೆ ತೆರಳದೆ ಮೆಟ್ಟಿಲುಗಳ ಮೇಲೆ ನಿರಾಶೆಯಿಂದ ಕುಳಿತಿದ್ದಾಗಿ ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯಕ್ಕೂ ಮುನ್ನ ತಿಳಿಸಿದ್ದಾರೆ.