ಇಂದೋರ್(ಮಧ್ಯಪ್ರದೇಶ): ಗಂಭೀರವಾಗಿ ಗಾಯಗೊಂಡಿರುವ ಆಂಧ್ರ ತಂಡದ ನಾಯಕ ಹನುಮ ವಿಹಾರಿ ಒಂದೇ ಕೈಯಲ್ಲಿ ಬ್ಯಾಟಿಂಗ್ ಮಾಡಿ ಅಚ್ಚರಿ ಮೂಡಿಸಿದ್ದಾರೆ. ಮಧ್ಯಪ್ರದೇಶ ವಿರುದ್ಧದ ರಣಜಿ ಕ್ವಾರ್ಟರ್‌ನ ಮೊದಲ ದಿನದಂದು, ಅವೇಶ್ ಬೌನ್ಸರ್‌ಗೆ ಹನುಮ ವಿಹಾರಿಯ ಎಡಗೈ ಮಣಿಕಟ್ಟಿನ ಮೂಳೆಗೆ ಗಂಭೀರವಾಗಿ ಪೆಟ್ಟಾಗಿತ್ತು. 16 ರನ್ ಗಳಿಸಿ ಬ್ಯಾಟಿಂಗ್ ಮಾಡದೇ ನಿವೃತ್ತಿಯಾಗಿದ್ದು, ಅವರು ಮತ್ತೆ ಬ್ಯಾಟಿಂಗ್ಗೆ ಬರುವುದಿಲ್ಲ ಅಂತಾ ಎಲ್ಲರೂ ತಿಳಿದಿದ್ದರು. ಆದ್ರೆ ಅಲ್ಲಿ ನಡೆದಿದ್ದೇ ಬೇರೆ..
ಹೌದು, ನಿರ್ಣಾಯಕ ಕ್ವಾರ್ಟರ್ಸ್ ಕದನ ನಡೆಯುತ್ತಿದ್ದು, ತಂಡಕ್ಕೆ ಸಾಧ್ಯವಾದಷ್ಟು ರನ್ ನೀಡುವ ಉದ್ದೇಶದಿಂದ ಎರಡನೇ ದಿನ ಹನ್ನೊಂದನೇ ಕ್ರಮಾಂಕದಲ್ಲಿ ಕ್ರೀಸ್ಗೆ ಬಂದರು. ಅವರು ಬಲಗೈ ಬ್ಯಾಟ್ಸ್‌ಮನ್ ಆಗಿದ್ದರು ಸಹ ಗಾಯದ ಸಮಸ್ಯೆಯಿಂದ ಎಡಗೈ ಬ್ಯಾಟಿಂಗ್ ಮಾಡಿದರು. ಅವರು ಒಂದು ಕೈಯಿಂದ ಅಂದ್ರೆ ಬಲಗೈಯಲ್ಲಿ ಬ್ಯಾಟ್ ಹಿಡಿದು ತಮ್ಮ ಆಟವನ್ನು ಮುಂದುವರಿಸಿದರು. ಕೈ ನೋವಿನ ನಡುವೆಯೂ ಅವರು ತಂಡಕ್ಕಾಗಿ ಹೋರಾಡಿದರು. 20 ಎಸೆತಗಳನ್ನು ಎದುರಿಸಿದ ಅವರು ಎರಡು ಬೌಂಡರಿ ಬಾರಿಸಿದರು. ಹಿಂದಿನ ದಿನದ ಸ್ಕೋರ್ಗೆ 11 ರನ್ ಸೇರಿಸಿ ಅಂತಿಮವಾಗಿ ಎಲ್ಬಿಡಬ್ಲ್ಯೂ ಆಗಿ ಔಟಾದರು.
ಈ ಪಂದ್ಯದಲ್ಲಿ ಆಂಧ್ರ ಮೊದಲ ಇನಿಂಗ್ಸ್‌ನಲ್ಲಿ 379 ರನ್‌ಗಳಿಗೆ ಆಲೌಟ್ ಆಯಿತು. ಇದಕ್ಕೂ ಮುನ್ನ ಆಂಧ್ರ 262/2 ಓವರ್‌ನೈಟ್ ಸ್ಕೋರ್‌ನೊಂದಿಗೆ ಬುಧವಾರ ಬ್ಯಾಟಿಂಗ್ ಮುಂದುವರಿಸಿತು. ಕರಣ್ (110) ಶತಕ ಗಳಿಸಿದರು. ಇನ್ನೊಂದು ತುದಿಯಲ್ಲಿ ರಿಕಿ ಭುಯಿ (149) ಶತಕ ಗಳಿಸಿ ಬ್ಯಾಟಿಂಗ್ ಮುಂದುವರಿಸಿದ್ದರು. ತಂಡ 323/2 ರನ್ಗಳಿಸಿ ಬೃಹತ್ ಸ್ಕೋರ್‌ನತ್ತ ಸಾಗಿತು. ಆದರೆ ಅನುಭವ್ ಅಗರ್ವಾಲ್ (4/72) ಈ ಇಬ್ಬರಿಗೂ ಔಟ್ ಮಾಡಿ ಪೆವಿಲಿಯನ್ ಹಾದಿ ತೋರಿಸಿದರು. ಹೀಗಾಗಿ ಆಂಧ್ರ ತಂಡ 379 ರನ್‌ಗಳಿಗೆ ದೀಢಿರ್ ಕುಸಿತು. ಮೊದಲ ಇನಿಂಗ್ಸ್ ಆರಂಭಿಸಿದ ಮಧ್ಯಪ್ರದೇಶ ದಿನದಾಟದ ಅಂತ್ಯಕ್ಕೆ 144/4 ರನ್ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದೆ. ಶುಭಂ (51) ಅರ್ಧಶತಕ ಗಳಿಸಿದರು. ಶಶಿಕಾಂತ್ ಎರಡು ವಿಕೆಟ್ ಪಡೆದು ಮಿಂಚಿದರು.
ಇನ್ನು, ತಂಡದ ಒತ್ತಡದ ಸಮಯದಲ್ಲಿಯೂ ಗಂಭೀರವಾಗಿ ಗಾಯಗೊಂಡಿದ್ದರೂ ಸಹ ಬ್ಯಾಟಿಂಗ್ ಆಡಲು ಬಂದ ಹನುಮ ವಿಹಾರಿ ಒಬ್ಬ ನಿಜವಾದ ಹೋರಾಟಗಾರ ಎಂದು ಅಶ್ವಿನ್ ಸೇರಿದಂತೆ ಅನೇಕ ಹಿರಿಯ ಆಟಗಾರರು ಟ್ವೀಟ್ ಮಾಡಿ ಶ್ಲಾಘಿಸಿದ್ದಾರೆ.