ಲೀಡ್ಸ್: ಇಂಗ್ಲೆಂಡ್ ವಿರುದ್ಧ 3ನೇ ಟೆಸ್ಟ್ನ ಮೊದಲ ಇನ್ನಿಂಗ್ಸ್ನಲ್ಲಿ ಕಳಪೆ ಬ್ಯಾಟಿಂಗ್ ಮೂಲಕ ಭಾರತ ತಂಡ ಕೇವಲ 78 ರನ್ಗಳಿಗೆ ಆಲೌಟ್ ಆಗಿದೆ. ನಂತರ ಬೌಲಿಂಗ್ನಲ್ಲಿ ಮೊನಚು ಕಳೆದುಕೊಂಡ ಬೌಲರ್ಗಳು 42 ಓವರ್ಗಳಲ್ಲಿ ಇಂಗ್ಲಿಷ್ ಆರಂಭಿಕರನ್ನು ಔಟ್ ಮಾಡುವಲ್ಲಿಯೂ ವಿಫಲರಾಗಿದ್ದಾರೆ.
ಇಂಗ್ಲೆಂಡ್ ನೆಲದಲ್ಲಿ ಇದೇ ಮೊದಲ ಬಾರಿಗೆ ಟಾಸ್ ಗೆದ್ದ ವಿರಾಟ್ ಕೊಹ್ಲಿ ಬ್ಯಾಟಿಂಗ್ ಮಾಡುವ ನಿರ್ಧಾರ ಕೈಗೊಂಡರು. ಆದರೆ ಜೇಮ್ಸ್ ಆ್ಯಂಡರ್ಸನ್ ಟೀಮ್ ಇಂಡಿಯಾ ಲೆಕ್ಕಾಚಾರವನ್ನು ತಲೆಕೆಳಗೆ ಮಾಡಿದರು. ಕೇವಲ 21 ರನ್ಗಳಾಗುವಷ್ಟರಲ್ಲಿ ಕೆ.ಎಲ್. ರಾಹುಲ್(0), ಪೂಜಾರ(1) ಮತ್ತು ಕೊಹ್ಲಿ(7) ಆ್ಯಂಡರ್ಸನ್ ಬೌಲಿಂಗ್ನಲ್ಲಿ ವಿಕೆಟ್ ಒಪ್ಪಿಸಿದರು.
ರೋಹಿತ್ ಮತ್ತು ರಹಾನೆ ಜೊತೆ 35 ರನ್ಗಳ ಜೊತೆಯಾಟ ನೀಡುವ ಮೂಲಕ ಚೇತರಿಕೆಯ ಭರವಸೆ ಮೂಡಿಸಿದ್ದರು. ಆದರೆ ನಂತರ ರಾಬಿನ್ಸನ್ 18 ರನ್ಗಳಿಸಿದ್ದ ರಹಾನೆ ವಿಕೆಟ್ ಪಡೆಯುವ ಮೂಲಕ ಭಾರತದ ಪತನಕ್ಕೆ ನಾಂದಿಯಾಡಿದರು. ರಹಾನೆ ಔಟಾಗುತ್ತಿದ್ದಂತೆ ಕೇವಲ 22 ರನ್ಗಳ ಅಂತರದಲ್ಲಿ ಭಾರತ ಆಲೌಟ್ ಆಗಿತ್ತು. ಕೊನೆಯ 5 ಬ್ಯಾಟ್ಸ್ಮನ್ಗಳು 25 ಎಸೆತಗಳಲ್ಲಿ ವಿಕೆಟ್ ಒಪ್ಪಿಸಿದರು.