ಮೆಲ್ಬೋರ್ನ್ (ಆಸ್ಟ್ರೇಲಿಯಾ): ದೀರ್ಘ ಕಾಲ ಆಸ್ಟ್ರೇಲಿಯಾ ತಂಡವನ್ನು ಯಶಸ್ವಿ ಆಗಿ ಮುನ್ನಡೆಸಿದ ಮೆಗ್ ಲ್ಯಾನಿಂಗ್ ನಿವೃತ್ತಿಯ ನಂತರ ಅವರ ಸ್ಥಾನಕ್ಕೆ ಅಲಿಸ್ಸಾ ಹೀಲಿ ಅವರನ್ನು ಕ್ರಿಕೆಟ್ ಆಸ್ಟ್ರೇಲಿಯಾ ನೇಮಕ ಮಾಡಿದೆ. ಮೂರು ಮಾದರಿಯ ಕ್ರಿಕೆಟ್ಗೆ ನಾಯಕಿಯಾಗಿ ಹೀಲಿ ಅವರನ್ನು ಘೋಷಿಸಿದೆ. ಆಲ್ ರೌಂಡರ್ ತಹ್ಲಿಯಾ ಮೆಕ್‌ಗ್ರಾತ್ ಉಪನಾಯಕಿಯಾಗಿ ಆಯ್ಕೆಯಾಗಿದ್ದಾರೆ.
ಮೆಗ್ ಲ್ಯಾನಿಂಗ್ ಅನುಪಸ್ಥಿತಿಯಲ್ಲಿ ಕಳೆದ 12 ತಿಂಗಳುಗಳಲ್ಲಿ ವಿವಿಧ ಹಂತಗಳಲ್ಲಿ ತಂಡವನ್ನು ಹೀಲಿ ಮುನ್ನಡೆಸಿದರು. ಹೀಲಿ 2018ರಿಂದ ದೇಶೀಯ ಏಕದಿನ ಕ್ರಿಕೆಟ್‌ನಲ್ಲಿ ನ್ಯೂ ಸೌತ್ ವೇಲ್ಸ್‌ನ ನಾಯಕತ್ವ ವಹಿಸಿದ್ದಾರೆ ಮತ್ತು ಮೊದಲ ಏಳು ವುಮೆನ್ ಬಿಗ್ ಬ್ಯಾಷ್ ಲೀಗ್ (ಡಬ್ಲ್ಯುಬಿಬಿಎಲ್) ಆವೃತ್ತಿಯಲ್ಲಿ ಸಿಡ್ನಿ ಸಿಕ್ಸರ್ಸ್ ಉಪನಾಯಕಿಯಾಗಿದ್ದರು.
ನಾಲ್ಕು ಬಾರಿ ಟಿ20 ವಿಶ್ವಕಪ್ ಪ್ರಶಸ್ತಿ, ಒಂದು ಏಕದಿನ ವಿಶ್ವಕಪ್ ಮತ್ತು 2022ರ ಕಾಮನ್‌ವೆಲ್ತ್ ಗೇಮ್ಸ್ ಚಿನ್ನ ಗೆಲ್ಲುವ ಮೂಲಕ ತಂಡವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ದ ಹಿರಿಮೆ ಮೆಗ್ ಲ್ಯಾನಿಂಗ್ ಅವರದ್ದು. 33 ವರ್ಷ ವಯಸ್ಸಿನ ಮೆಗ್ ಲ್ಯಾನಿಂಗ್ ಏಕದಿನ ಕ್ರಿಕೆಟ್‌ನಲ್ಲಿ 15 ಶತಕಗಳೊಂದಿಗೆ 4,602 ರನ್ ಹಾಗು ಟಿ-20ಯಲ್ಲಿ 2 ಶತಕ ಒಳಗೊಂಡಂತೆ 3,405 ರನ್ ದಾಖಲೆ ಹೊಂದಿದ್ದಾರೆ.
ಮೆಕ್‌ಗ್ರಾತ್ ಡಬ್ಲ್ಯುಬಿಬಿಎಲ್ನಲ್ಲಿ ಅಡಿಲೇಡ್ ಸ್ಟ್ರೈಕರ್ ತಂಡದ ನಾಯಕತ್ವ ವಹಿಸಿದ್ದು ಬ್ಯಾಕ್-ಟು-ಬ್ಯಾಕ್ ಪ್ರಶಸ್ತಿಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ. ಆಸ್ಟ್ರೇಲಿಯಾ ತಂಡದಲ್ಲಿ ಪ್ರಮುಖ ಆಟಗಾರ್ತಿ ಆಗಿರುವ ಅವರು ಜುಲೈನಲ್ಲಿ ಐರ್ಲೆಂಡ್ ವಿರುದ್ಧದ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಆಸ್ಟ್ರೇಲಿಯಾದ ನಾಯಕರಾಗಿದ್ದರು.