ಮುಂಬೈ(ಮಹಾರಾಷ್ಟ್ರ):ಇಲ್ಲಿನ ವಾಂಖೆಡೆ ಮೈದಾನದಲ್ಲಿ ನಡೆದ ಆಸ್ಟ್ರೇಲಿಯಾ ಮಹಿಳಾ ತಂಡದ ವಿರುದ್ಧದ ಏಕೈಕ ಟೆಸ್ಟ್ ಪಂದ್ಯವನ್ನು ಭಾರತ ಮಹಿಳಾ ತಂಡ ಗೆದ್ದುಕೊಂಡಿತು. ಇದು ಆಸ್ಟ್ರೇಲಿಯಾದ ವಿರುದ್ಧದ ಭಾರತದ ವನಿತೆಯರ ಮೊದಲ ಗೆಲುವಾಗಿದೆ. ತಂಡದ ಆಟಗಾರ್ತಿಯರ ಸಂಭ್ರಮದಲ್ಲಿ ಆಸ್ಟ್ರೇಲಿಯಾ ನಾಯಕಿ ಅಲಿಸ್ಸಾ ಹೀಲಿ ಕೂಡಾ ಪಾಲ್ಗೊಂಡು ಗಮನ ಸೆಳೆದರು.
ಆಸ್ಟ್ರೇಲಿಯಾ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ಮೊದಲ ಇನ್ನಿಂಗ್ಸ್‌ನಲ್ಲಿ ಆಲ್‌ರೌಂಡರ್ ತಹ್ಲಿಯಾ ಮೆಕ್‌ಗ್ರಾತ್ (50), ಬೆತ್ ಮೂನಿ (40) ಮತ್ತು ಹೀಲಿ (38) ಅವರ ಇನ್ನಿಂಗ್ಸ್ ಬಲದಿಂದ ತಂಡ 219 ರನ್‌ಗಳಿಸಿ ಆಲೌಟಾಯಿತು. ಭಾರತದ ಪರ ಪೂಜಾ ವಸ್ತ್ರಾಕರ್ (4/53), ಸ್ನೇಹ ರಾಣಾ (3/56) ಮತ್ತು ದೀಪ್ತಿ ಶರ್ಮಾ (2/45) ಯಶಸ್ವಿ ಬೌಲಿಂಗ್ ಮಾಡಿದರು.
ಭಾರತ ಮೊದಲ ಇನಿಂಗ್ಸ್‌ನಲ್ಲಿ 406 ರನ್ ಗಳಿಸಿ ಆಲೌಟಾಯಿತು. ಈ ಮೂಲಕ 187 ರನ್‌ಗಳ ಮುನ್ನಡೆ ಸಾಧಿಸಿತು. ಶಫಾಲಿ ವರ್ಮಾ (40) ಮತ್ತು ಸ್ಮೃತಿ ಮಂಧಾನ (74) ಉತ್ತಮ ಆರಂಭ ನೀಡಿದರು. ಮಧ್ಯಮ ಕ್ರಮಾಂಕ ಮತ್ತು ಕೆಳ ಕ್ರಮಾಂಕದಲ್ಲಿ ರಿಚಾ ಘೋಷ್ (52), ಜೆಮಿಮಾ ರಾಡ್ರಿಗಸ್ (73), ದೀಪ್ತಿ ಶರ್ಮಾ (78) ಅರ್ಧಶತಕ ಗಳಿಸಿದರೆ, ವಸ್ತ್ರಾಕರ್ 47 ರನ್ ಗಳಿಸಿ ತಂಡಕ್ಕೆ ಕೊಡುಗೆ ನೀಡಿದರು. ಆಸೀಸ್ ಪರ ಆಶ್ಲೀಗ್ ಗಾರ್ಡ್ನರ್ 4 ಮತ್ತು ಕಿಮ್ ಗಾರ್ತ್, ಜೆಸ್ ಜೊನಾಸೆನ್ ತಲಾ ಎರಡು ವಿಕೆಟ್ ಪಡೆದರು.