ದುಬೈ: ಟಿ-20 ಕ್ರಿಕೆಟ್ ಉಳಿಸಿಕೊಳ್ಳುವ ಆಲೋಚನೆಯಲ್ಲಿದ್ದ ಹಾಲಿ ಚಾಂಪಿಯನ್ ವೆಸ್ಟ್ ಇಂಡೀಸ್ಗೆ ಭಾರಿ ಹೊಡೆತ ಬಿದ್ದಿದ್ದು, ಟೂರ್ನಿ ಆರಂಭಕ್ಕೂ ಮುನ್ನವೇ ಆಲ್ರೌಂಡರ್ ಫ್ಯಾಬಿಯನ್ ಅಲೆನ್ ಗಾಯಗೊಂಡು ಹೊರಬಿದ್ದಿದ್ದಾರೆ.
ವೆಸ್ಟ್ ಇಂಡೀಸ್ ತಂಡದ ಪ್ರಮುಖ ಸ್ಪಿನ್ನರ್ ಹಾಗೂ ಮಧ್ಯಮ ಕ್ರಮಾಂಕದಲ್ಲಿ ಉತ್ತಮ ಬ್ಯಾಟರ್ ಆಗಿದ್ದ ಫ್ಯಾಬಿಯನ್ ಅಲೆನ್ ಪಾದದ ಗಾಯಕ್ಕೆ ಒಳಗಾಗಿದ್ದಾರೆ. ಇದೇ ಕಾರಣ ಚುಟುಕು ಮಹಾಸಮರದಿಂದ ಹೊರಬಿದ್ದಿದ್ದಾರೆ. ಆದ್ದರಿಂದ ಅಂತಿಮ 15ರ ಬಳಗಕ್ಕೆ ಮೀಸಲು ಆಟಗಾರನಾಗಿದ್ದ ಸ್ಪಿನ್ನರ್ ಅಕಿಲ್ ಹೊಸೈನ್ರನ್ನು ಬದಲೀ ಆಟಗಾರರನ್ನಾಗಿ ನೇಮಕ ಮಾಡಲಾಗಿದೆ.
ಫ್ಯಾಬಿಯನ್ ಅಲೆನ್ 2018ರಲ್ಲಿ ವೆಸ್ಟ್ ಇಂಡೀಸ್ ತಂಡಕ್ಕೆ ಪದಾರ್ಪಣೆ ಮಾಡಿದಾಗಿನಿಂದಲೂ ತಂಡದ ಖಾಯಂ ಆಟಗಾರನಾಗಿದ್ದರು. ಇತ್ತೀಚೆಗೆ ಮುಗಿದ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿ ಮತ್ತು ಕೆರಿಬಿಯನ್ ಪ್ರೀಮಿಯರ್ ಲೀಗ್ನಲ್ಲಿ ಇವರು ಆಡಿದ್ದರು.
ಇನ್ನು ತಂಡಕ್ಕೆ ಸೇರ್ಪಡೆಗೊಂಡಿರುವ ಎಡಗೈ ಸ್ಪಿನ್ನರ್ ಅಕೀಲ್ ಹೊಸೈನ್ ಇತ್ತೀಚೆಗೆ ಮುಗಿದ ಕೆರಿಬಿಯನ್ ಪ್ರೀಮಿಯರ್ ಲೀಗ್ನಲ್ಲಿ ಟ್ರಿಂಬಾಗೋ ನೈಟ್ ರೈಡರ್ಸ್ ಪರ ಆಡಿದ್ದರು. ನರೈನ್ ಜೊತೆಗಾರನಾಗಿದ್ದ ಹೊಸೈನ್ 4.92ರ ಎಕಾನಮಿಯಲ್ಲಿ 13 ವಿಕೆಟ್ ಪಡೆದಿದ್ದರು.
ವೆಸ್ಟ್ ಇಂಡೀಸ್ ತಂಡ ಈ ಬಾರಿಯ ಟಿ-20 ವಿಶ್ವಕಪ್‌ನಲ್ಲಿ ಸೂಪರ್ 12ಗೆ ನೇರ ಅರ್ಹತೆ ಪಡೆದುಕೊಂಡಿದೆ. ಆಸ್ಟ್ರೇಲಿಯಾ , ದಕ್ಷಿಣ ಆಫ್ರಿಕಾ ತಂಡಗಳಿರುವ ಗುಂಪಿನಲ್ಲಿ ಅವಕಾಶ ಪಡೆದಿದೆ. ವಿಂಡೀಸ್ ಅಕ್ಟೋಬರ್ 23ರಂದು ತಮ್ಮ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ವಿರುದ್ಧ ಸೆಣೆಸಾಡಲಿದೆ.
ವೆಸ್ಟ್ ಇಂಡೀಸ್ ತಂಡ: ಕೀರನ್ ಪೊಲಾರ್ಡ್ (ನಾಯಕ), ನಿಕೋಲಸ್ ಪೂರನ್ (ಉಪ ನಾಯಕ), ಡ್ವೇಯ್ನ್ ಬ್ರಾವೊ, ರಾಸ್ಟನ್ ಚೇಸ್, ಆಂಡ್ರೆ ಫ್ಲೆಚರ್, ಕ್ರಿಸ್ ಗೇಲ್, ಶಿಮ್ರಾನ್ ಹೆಟ್ಮಾಯರ್, ಎವಿನ್ ಲೂಯಿಸ್, ಓಬೆಡ್ ಮೆಕಾಯ್, ಲೆಂಡ್ಲ್ ಸಿಮನ್ಸ್, ರವಿ ರಾಂಪಾಲ್, ಆಂಡ್ರೆ ರಸೆಲ್, ಓಶನ್ ಥಾಮಸ್, ಹೇಡನ್ ವಾಲ್ಷ್ ಜೂನಿಯರ್, ಅಕಿಲ್ ಹೊಸೈನ್. ಮೀಸಲು ಆಟಗಾರರು: ಡ್ಯಾರೆನ್ ಬ್ರಾವೊ, ಶೆಲ್ಡನ್ ಕಾಟ್ರೆಲ್, ಜೇಸನ್ ಹೋಲ್ಡರ್
ಇದನ್ನು ಓದಿ:ವಿಶ್ವಕಪ್‌ನಲ್ಲಿ ಭಾರತ ವಿರುದ್ಧ ಪಾಕ್ ಮುಗ್ಗರಿಸುವುದೇಕೆ?.. ಅದಕ್ಕೆ ಕಾರಣ ತಿಳಿಸಿದರು ಸೆಹ್ವಾಗ್..