ಕರ್ನಾಟಕ

karnataka

ETV Bharat / sports

2011ರ ಚಾಂಪಿಯನ್ಸ್​ ಟ್ರೋಫಿ ಬಳಿಕ ಐಸಿಸಿ ಟ್ರೋಫಿ ಬರ.. ವಿಶ್ವಕಪ್​ ಗೆದ್ದು ಪ್ರಶಸ್ತಿ ನಿರ್ವಾತ ತುಂಬಲಿದೆಯೇ ಟೀಂ ಇಂಡಿಯಾ? - India Hot favorite team

2013 ರ ಚಾಂಪಿಯನ್ಸ್ ಟ್ರೋಫಿ ಬಳಿಕ ಐಸಿಸಿ ಟ್ರೋಫಿಗಳನ್ನು ಗೆಲ್ಲುವಲ್ಲಿ ಭಾರತ ವಿಫಲವಾಗಿದೆ. ಪ್ರಶಸ್ತಿ ನಿರ್ವಾತವನ್ನು ನೀಗಿಸುವ ಕಾಲ ಮತ್ತೆ ಬಂದಿದೆ. ಏಕದಿನ ವಿಶ್ವಕಪ್ ಗೆಲ್ಲುವ ಹಾಟ್​ ಫೆವರೀಟ್​ ತಂಡವಾದ ಟೀಂ ಇಂಡಿಯಾದ ಬಲ ಮತ್ತು ದೌರ್ಬಲ್ಯಗಳೇನು ಎಂಬುದರ ವಿಶ್ಲೇಷಣೆ ಇಲ್ಲಿದೆ.

ಟೀಂ ಇಂಡಿಯಾ
ಟೀಂ ಇಂಡಿಯಾ

By ETV Bharat Karnataka Team

Published : Sep 30, 2023, 4:16 PM IST

ಹೈದರಾಬಾದ್:ಅದು 2013ರ ಚಾಂಪಿಯನ್ಸ್​ ಟ್ರೋಫಿ. ಭಾರತ ಕ್ರಿಕೆಟ್​ನ ಅತ್ಯಂತ ಯಶಸ್ವಿ ನಾಯಕ ಮಹೇಂದ್ರ ಸಿಂಗ್​ ಧೋನಿ ಅವರ ನೇತೃತ್ವದಲ್ಲಿ ತಂಡ ಇಂಗ್ಲೆಂಡ್​ ಅನ್ನು ಬಗ್ಗು ಬಡಿದು ಟ್ರೋಫಿ ಗೆದ್ದಿತ್ತು. ಅದೇ ಕೊನೆ ಈವರೆಗೂ ಐಸಿಸಿ ಆಯೋಜಿಸುವ ಯಾವೊಂದೂ ಟೂರ್ನಿ ಗೆಲ್ಲುವಲ್ಲಿ ಭಾರತ ಸಫಲವಾಗಿಲ್ಲ. ಎರಡು ಬಾರಿ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ ಫೈನಲ್​ಗೇರಿದರೂ ಗೆಲುವು ಮಾತ್ರ ಮರೀಚಿಕೆಯಾಗಿದೆ. ಈಗ ಭಾರತ ಟ್ರೋಫಿ ಗೆಲ್ಲಲು ಮತ್ತೊಂದು ಅವಕಾಶ ಬಂದಿದೆ. ಅದೇ ತವರಿನಲ್ಲಿ ನಡೆಯುವ ಏಕದಿನ ವಿಶ್ವಕಪ್​.

ಹೌದು, ವಿಶ್ವಮಾನ್ಯ ಬ್ಯಾಟರ್​ಗಳನ್ನು ಹೊಂದಿರುವ ಭಾರತ ತಂಡ ಈ ಬಾರಿ ವಿಶ್ವಕಪ್​ ಎತ್ತಿ ಹಿಡಿಯುವ ಬಹು ನಿರೀಕ್ಷೆ ಇದೆ. ತವರಿನಲ್ಲಿ ವಿಶ್ವಕಪ್​ ನಡೆಯುತ್ತಿರುವುದು ಒಂದೆಡೆಯಾದರೆ, ಬಲಿಷ್ಠ ಸ್ಪಿನ್​ ವಿಭಾಗವೂ ಪ್ಲಸ್​ ಆಗಿದೆ. ತವರು ಮೈದಾನಗಳಲ್ಲಿ ಗೆಲುವಿನ ಜೈತ್ರಯಾತ್ರೆ, ಆಟಗಾರರ ಲಯ ಎರಡೂ ಮುಂದುವರಿದಲ್ಲಿ 3ನೇ ವಿಶ್ವಕಪ್​ ನಮ್ಮದಾಗೋದು ಮಾತ್ರ ಖಂಡಿತ. ಇದೇ ಹಾದಿಯಲ್ಲಿ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್​ ತಂಡಗಳು ಕಠಿಣ ಟಕ್ಕರ್​ ನೀಡುವುದನ್ನು ಮರೆಯುವಂತಿಲ್ಲ.

ಭಾರತ ತಂಡದ ಸಾಮರ್ಥ್ಯವೇನು?:ವಿಶ್ವಕಪ್​ಗೂ ಮುನ್ನ ನಡೆದ ವೆಸ್ಟ್​ ಇಂಡೀಸ್​, ಐರ್ಲೆಂಡ್​, ಏಷ್ಯಾ ಕಪ್​, ಆಸ್ಟ್ರೇಲಿಯಾ ವಿರುದ್ಧದ ಸರಣಿಗಳೆಲ್ಲವನ್ನೂ ಭಾರತ ಬಾಚಿಕೊಂಡಿದೆ. ತಂಡದ ಆಟಗಾರರರೂ ಅಮೋಘ ಫಾರ್ಮ್​ನಲ್ಲಿದ್ದಾರೆ. ವಿಶ್ವಕಪ್​ನಲ್ಲಿ ಸವಾಲಾಗುವ ತಂಡವಾದ ಆಸೀಸ್​​ ವಿರುದ್ಧ 2-1 ರಿಂದ ಏಕದಿನ ಸರಣಿ ಗೆದ್ದಿದೆ. ನಾಯಕ ರೋಹಿತ್ ಶರ್ಮಾ ಆಡಿದ ಕೊನೆಯ 4 ಏಕದಿನ ಇನ್ನಿಂಗ್ಸ್‌ಗಳಲ್ಲಿ 3 ಅರ್ಧಶತಕಗಳನ್ನು ಬಾರಿಸಿದ್ದಾರೆ. ಜೊತೆಗೆ ಬ್ಯಾಟಿಂಗ್ ಕಿಂಗ್​ ವಿರಾಟ್ ಕೊಹ್ಲಿ ಅವರನ್ನು ತಡೆಯೋರೇ ಇಲ್ಲವಾಗಿದೆ.

ಇತ್ತ ಯುವ ಆಟಗಾರ, ಭಾರತ ಕ್ರಿಕೆಟ್​ನ ಕಣ್ಮಣಿ ಎಂದೇ ಗುರುತಿಸಿಕೊಂಡಿರುವ ಶುಭ್​ಮನ್ ಗಿಲ್ ದಂಡಿಯಾಗಿ ರನ್ ಕಲೆಹಾಕುತ್ತಿದ್ದಾರೆ. ಆಸ್ಟ್ರೇಲಿಯಾ ಸರಣಿಯಲ್ಲಿ 2 ಅರ್ಧಶತಕ, ಏಷ್ಯಾಕಪ್‌ನಲ್ಲಿ ಅಗ್ರ ಸ್ಕೋರರ್ ಆಗಿ ಹೊರಹೊಮ್ಮಿದ್ದರು. ಗಾಯದಿಂದ ಚೇತರಿಸಿಕೊಂಡಿರುವ ಕೆಎಲ್ ರಾಹುಲ್ ಮತ್ತು ಶ್ರೇಯಸ್ ಅಯ್ಯರ್ ಆಸೀಸ್​ ಸರಣಿಯಲ್ಲಿ ತಮ್ಮ ಬಾಹುಬಲ ತೋರಿಸಿದ್ದು, ತಂಡದ ಬ್ಯಾಟಿಂಗ್ ವಿಭಾಗ ಉಕ್ಕಿನ ಸೇತುವೆಯಂತಿದೆ.

ಬೌಲಿಂಗ್​ ವಿಭಾಗದಲ್ಲಿ ಚೈನಾಮನ್​ ಸ್ಪಿನ್ನರ್​ ಕುಲದೀಪ್ ಯಾದವ್ ಕರಾಮತ್ತಿಗೆ ಹಿರಿಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಜೋಡಣೆಯಾಗಿದ್ದರೆ, ರವೀಂದ್ರ ಜಡೇಜಾ ಸ್ಪಿನ್ ವಿಭಾಗದ ಟ್ರಂಪ್​ ಕಾರ್ಡ್​ ಆಗಿದ್ದಾರೆ. ಏಷ್ಯಾಕಪ್‌ ಫೈನಲ್‌ನಲ್ಲಿ ವೇಗಿ ಮೊಹಮ್ಮದ್ ಸಿರಾಜ್ ಉರಿಚೆಂಡಿನಿಂದ ಲಂಕಾದಹನ ಮಾಡಿದ್ದರು. ಇಷ್ಟ ಸಾಲದು ಎಂಬಂತೆ ಮೊಹಮ್ಮದ್ ಶಮಿ ಕೂಡ ಆಸೀಸ್​​ ವಿರುದ್ಧ 5 ವಿಕೆಟ್‌ಗಳ ಗೊಂಚಲು ಪಡೆದಿದ್ದರು. ಇದೆಲ್ಲವೂ ಭಾರತ ವಿಶ್ವಕಪ್​​ ಗೆಲ್ಲುವ ಹಾಟ್​ ಫೆವರೀಟ್​​ ತಂಡ ಎಂಬುದಕ್ಕೆ ಸಾಕ್ಷಿ.

ತಂಡದ ದೌರ್ಬಲ್ಯಗಳು:ಭಾರತ ತಂಡದಲ್ಲಿರುವ ಹೆಚ್ಚಿನ ಬ್ಯಾಟರ್‌ಗಳು ಬಲಗೈ ಆಟಗಾರರಾಗಿದ್ದು, ಎಡಗೈ ಬ್ಯಾಟಿಂಗ್ ಆಯ್ಕೆಯ ಕೊರತೆಯಿದೆ. ಇಶಾನ್ ಕಿಶನ್ ತಂಡದಲ್ಲಿರುವ ಏಕೈಕ ತಜ್ಞ ಬ್ಯಾಟರ್​. ಕಿಶನ್​ ಹೊರತಾಗಿ ಜಡೇಜಾ ಎಡಗೈ ಬ್ಯಾಟರ್​. ಆಡುವ ಹನ್ನೊಂದರಲ್ಲಿ ಕಿಶನ್​ ಸ್ಥಾನ ಪಡೆಯುವ ಸಾಧ್ಯತೆ ತೀರಾ ಕಡಿವೆ. ಹೀಗಾಗಿ ಲೆಗ್​ ಸ್ಪಿನ್ನರ್​ಗಳನ್ನು ಎದುರಿಸಲು ಸೂಕ್ತ ಪ್ರತ್ಯಸ್ತ್ರ ಇಲ್ಲದೇ ತಂಡ ಕಣಕ್ಕಿಳಿಯಬೇಕಿದೆ. ಕೆಎಲ್ ರಾಹುಲ್ ಅರೆಕಾಲಿಕ ವಿಕೆಟ್‌ಕೀಪರ್ ಆಗಿದ್ದು, ಸ್ಪೆಷಲಿಸ್ಟ್ ಕೀಪಿಂಗ್​ ಅನುಪಸ್ಥಿತಿಯು ಎದುರಾಳಿ ಬ್ಯಾಟರ್‌ಗಳನ್ನು ಔಟ್ ಮಾಡುವಲ್ಲಿ ಕಳಾಹೀನವಾಗಬಹುದು.

ಬೌಲಿಂಗ್ ಆಲ್​ರೌಂಡರ್ ಆಗಿ ಶಾರ್ದೂಲ್ ಠಾಕೂರ್​ರನ್ನು ಕೆಳ ಕ್ರಮಾಂಕದಲ್ಲಿ ಆಡಿಸುವ ಮೂಲಕ ತಂಡದ ಬ್ಯಾಟಿಂಗ್ ಬಲವನ್ನು ಹೆಚ್ಚಿಸುವತ್ತ ಗಮನಹರಿಸಲಾಗಿದೆ. ಶಾರ್ದೂಲ್ 44 ಏಕದಿನ ಪಂದ್ಯಗಳಿಂದ 6.24 ಎಕಾನಮಿ ದರದಲ್ಲಿ ಬೌಲ್​ ಮಾಡಿದ್ದು ಅಷ್ಟೇನೂ ಪ್ರಭಾವ ಬೀರಿಲ್ಲ. ಆಯ್ಕೆ ವಿಚಾರ ಬಂದಾಗ ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್ ಅಥವಾ ರವಿಚಂದ್ರನ್ ಅಶ್ವಿನ್ ಅವರಂತಹ ನಿಪುಣ ಆಟಗಾರರು ಸ್ಥಾನ ಕಳೆದುಕೊಳ್ಳುವ ಸಾಧ್ಯತೆ ಇದೆ.

ನಿರಂತರ ಬದಲಾವಣೆ ಮಾಡುತ್ತಿರುವುದು ತಂಡದ ನಿಜವಾದ ಸಮಸ್ಯೆಯಾಗಿದೆ. ತಂಡದ ಸಂಯೋಜನೆಯಲ್ಲಿ ಈಗಲೂ ಕೆಲ ಗೊಂದಲಗಳಿವೆ. ಮಧ್ಯಮ ಕ್ರಮಾಂಕದಲ್ಲಿ ಯಾರನ್ನು ಆಡಿಸಬೇಕು ಎಂಬುದು ಬಗೆಹರಿದಿಲ್ಲ. ಬಲಿಷ್ಠ ಬ್ಯಾಟಿಂಗ್ ಜೊತೆಗೆ ಮೂವರು ಸ್ಪೆಷಲಿಸ್ಟ್ ವೇಗಿಗಳು, ಮೂವರು ಸ್ಪಿನ್ನರ್ಸ್​ ಮತ್ತು ಆಲ್​ರೌಂಡರ್ ನಡುವೆ ಆಯ್ಕೆ ಗೊಂದಲವಿದೆ. ಇಲ್ಲಿ ಗಮನಿಸಬೇಕಾದ ಇನ್ನೊಂದು ಅಂಶವೆಂದರೆ, ರೋಹಿತ್ ಅಂಡ್​ ಟೀಂ ಸಮತಟ್ಟಾದ ಪಿಚ್​ಗಳಲ್ಲಿ ವೈಫಲ್ಯ ಅನುಭವಿಸುತ್ತಿದೆ.

ಸಮತಟ್ಟಾದ ಪಿಚ್​ಗಳಲ್ಲಿ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಅತ್ಯಂತ ಆಕ್ರಮಣಕಾರಿ ಆಟವನ್ನು ಆಡಲಿದೆ. ಇದು ಭಾರತಕ್ಕಿರುವ ದೊಡ್ಡ ಸವಾಲು. ಎದುರಾಳಿ ತಂಡ ಪ್ರತಿರೋಧ ಒಡ್ಡಿದಲ್ಲಿ ಭಾರತದ ಬ್ಯಾಟಿಂಗ್ ಪಡೆ ಠುಸ್ಸಾಗಲಿದೆ. ಇದರ ಜೊತೆಗೆ ಬ್ಯಾಟರ್​ಗಳು ಒತ್ತಡ ನಿಭಾಯಿಸಲು ವಿಫಲವಾಗಿ 2011 ರ ಬಳಿಕ ವಿಶ್ವಕಪ್ ಪಂದ್ಯಾವಳಿಯಲ್ಲಿ ತಂಡ ನಾಕೌಟ್‌ ಹಂತದಲ್ಲೇ ಹೊರಬಿದ್ದಿದೆ.

ಯುವ ಆಟಗಾರರಿಗಿದೆ ದೊಡ್ಡ ಅವಕಾಶ:ಭಾರತ ಕ್ರಿಕೆಟ್​ ಮತ್ತೊಂದು ಬಲಿಷ್ಠ ಯುವ ಪಡೆಯನ್ನು ಸಜ್ಜು ಮಾಡುವತ್ತ ಹೊರಳಿದೆ. ರೋಹಿತ್​ ಶರ್ಮಾ, ವಿರಾಟ್​ ಕೊಹ್ಲಿ ಜಾಗವನ್ನು ಸಮರ್ಥವಾಗಿ ತುಂಬಬಲ್ಲ ಆಟಗಾರರ ಶೋಧದಲ್ಲಿದೆ. ಶುಭ್​ಮನ್​ ಗಿಲ್​, ಇಶಾನ್​ ಕಿಶನ್​ ಮೇಲೆ ಹೆಚ್ಚಿನ ಭಾರ ಹೆಚ್ಚಿದೆ. ಗಿಲ್​ ಅಮೋಘ ಲಯದ್ದಲ್ಲಿದ್ದು, 72.35 ರ ಅದ್ಭುತ ಸರಾಸರಿ ಹೊಂದಿದ್ದಾರೆ. ಈತನನ್ನು ಭಾರತ ಕ್ರಿಕೆಟ್‌ನ ಭವಿಷ್ಯದ ತಾರೆ ಎಂದೇ ಕಾಣಲಾಗುತ್ತಿದೆ. ಇನ್ನೋರ್ವ ಯುವ ಆಟಗಾರ ಇಶಾನ್ ಕಿಶನ್, ಆಡುವ ಹನ್ನೊಂದರಲ್ಲಿ ಸೇರಿಕೊಂಡಲ್ಲಿ, ಬ್ಯಾಟಿಂಗ್ ಪರಾಕ್ರಮದ ಜೊತೆಗೆ ವಿಕೆಟ್ ಕೀಪಿಂಗ್ ಕೌಶಲ್ಯವನ್ನು ಪ್ರದರ್ಶಿಸುವ ಅವಕಾಶವನ್ನು ಪಡೆಯಲಿದ್ದಾರೆ.

ಇದನ್ನೂ ಓದಿ:ರೋಹಿತ್ ಶರ್ಮಾ ನಿಷ್ಠಾವಂತ ನಾಯಕ.. ಆದರೆ, ಧೋನಿಗೆ ಎದುರಾಳಿ ಯೋಜನೆ ಅರಿಯುವ ಸಾಮರ್ಥ್ಯ ಇತ್ತು: ಚಂಚಲ್ ಭಟ್ಟಾಚಾರ್ಯ

ABOUT THE AUTHOR

...view details