ದುಬೈ: ಭಾನುವಾರ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ಕ್ವಾಲಿಫೈನಲ್ನಲ್ಲಿ ಗೆಲ್ಲಲು ನೆರವಾಗಿದ್ದ ಕನ್ನಡಿಗ ರಾಬಿನ್ ಉತ್ತಪ್ಪ ತಮಗೆ ಐಪಿಎಲ್‌ನಲ್ಲಿ ಗಂಭೀರ್ ನಾಯಕತ್ವದ ಕೋಲ್ಕತ್ತಾ ನೈಟ್ ರೈಡರ್ಸ್ ಬಳಿಕ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಅತ್ಯಂತ ಸುರಕ್ಷಿತ ಭಾವನೆ ಉಂಟಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಭಾನುವಾರ ದುಬೈನಲ್ಲಿ ನಡೆದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆದ ಮೊದಲ ಕ್ವಾಲಿಫೈಯರ್‌ನಲ್ಲಿ ಉತ್ತಪ್ಪ 44 ಎಸೆತಗಳನ್ನು ಎದುರಿಸಿ 7 ಬೌಂಡರಿ ಹಾಗೂ 2 ಸಿಕ್ಸರ್ಗಳ ನೆರವಿನಿಂದ 63 ರನ್ ಗಳಿಸಿದರು. ಈ ಅದ್ಭುತ ಇನ್ನಿಂಗ್ಸ್ ಬಳಿಕ ಮಾತನಾಡಿದ ಅವರು, ಚೆನ್ನೈನಲ್ಲಿ ತಮಗೆ ಗಂಭೀರ್ ನಾಯಕತ್ವದಲ್ಲಿ ಆಡಿದ ಬಳಿಕ ಇದೇ ಮೊದಲ ಬಾರಿಗೆ ಸುರಕ್ಷಿತ ಭಾವನೆ ಉಂಟಾಗಿದೆ ಎಂದು ಉತ್ತಪ್ಪ ತಿಳಿಸಿದ್ದಾರೆ.
ಚೆನ್ನೈ ಅತ್ಯಂತ ಸುರಕ್ಷಿತವಾದ ಫ್ರಾಂಚೈಸಿಗಳಲ್ಲಿ ಒಂದಾಗಿದೆ ಎಂದು ನಾನು ಸಮರ್ಥಿಸುತ್ತೇನೆ ಮತ್ತು ತಂಡದಲ್ಲಿರುವ ಪ್ರತಿಯೊಬ್ಬರೂ ಸುರಕ್ಷತೆಯ ಭಾವನೆ ಹೊಂದಿದ್ದಾರೆ. ಎಲ್ಲಾ ಆಟಗಾರರು ಫ್ರಾಂಚೈಸ್‌ಗೆ ತಮ್ಮಿಂದ ಹೆಚ್ಚಿನದನ್ನು ನೀಡಲು ಬಯಸುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ