ಲಂಡನ್ :ಭಾರತ ತಂಡದ ನಾಯಕ ವಿರಾಟ್ ಕೊಹ್ಲಿಯ ಆಕ್ರಮಣಶೀಲತೆಯನ್ನು ನಾನು ಮೆಚ್ಚಿಕೊಳ್ಳುತ್ತೇನೆ. ಆದರೆ, ಅವರ ಆಕ್ರಮಣಕಾರಿ ಮನೋಭಾವನೆ ಮಿತಿಯಲ್ಲಿದ್ದರೆ ಒಳ್ಳೆಯದೆಂದು ನಾನು ಭಾವಿಸುತ್ತೇನೆ ಎಂದು ಮಾಜಿ ವಿಕೆಟ್ ಕೀಪರ್ ಕಮ್ ಬ್ಯಾಟ್ಸ್‌ಮನ್ ಫಾರೂಕ್ ಇಂಜಿನಿಯರ್ ಹೇಳಿದ್ದಾರೆ.
ಲಾರ್ಡ್ಸ್‌ನಲ್ಲಿ ನಡೆದ 2ನೇ ಟೆಸ್ಟ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ತಂಡ 151 ರನ್ಗಳ ಗೆಲುವು ದಾಖಲಿಸುವಲ್ಲಿ ಯಶಸ್ವಿಯಾಗಿತ್ತು. ಆದರೆ, ಈ ಪಂದ್ಯದ ವೇಳೆ ವಿರಾಟ್ ಕೊಹ್ಲಿ ಕೆಲವು ಆಟಗಾರರೊಂದಿಗೆ ವಾಕ್ ಸಮರ ನಡೆಸಿದ್ದರು. ಹಾಗಾಗಿ, ಭಾರತ ತಂಡದ ನಾಯಕ ಕೊಹ್ಲಿ ಎದುರಾಳಿಗಳೊಂದಿಗೆ ಮಾತಿನ ಚಕಮಕಿಯಲ್ಲಿ ತೊಡಗಿಕೊಳ್ಳುವಾಗ ಮಾತಿನ ಮೇಲೆ ಎಚ್ಚರಿಕೆ ವಹಿಸಬೇಕೆಂದು 83 ವರ್ಷದ ಮಾಜಿ ಕ್ರಿಕೆಟಿಗ ಫಾರೂಖ್ ಇಂಜಿನಿಯರ್ ಒತ್ತಾಯಿಸಿದ್ದಾರೆ.
"ವಿರಾಟ್ ಗುಣವನ್ನು ನಾನು ಒಪ್ಪಿಕೊಳ್ಳುತ್ತೇನೆ. ಆತ ಆಕ್ರಮಣಕಾರಿ ನಾಯಕನಾಗಿದ್ದಾನೆ. ಇದು ಒಳ್ಳೆಯದು. ಆದರೆ, ಇದು ಖಂಡಿತವಾಗಿಯೂ ಮಿತಿಯಲ್ಲಿರಬೇಕು. ಇಲ್ಲದಿದ್ದರೆ ಅಂಪೈರ್ ಅಥವಾ ಮ್ಯಾಚ್ ರೆಫರಿ ಮಧ್ಯಪ್ರವೇಶಿಸಬಹುದು" ಎಂದು ಇಂಜಿನಿಯರ್ ಹೇಳಿದರು.