ದುಬೈ: ಭಾರತದ 19 ವರ್ಷದೊಳಗಿನ ಯುವ ಪಡೆ ಪಾಕಿಸ್ತಾನದ ವಿರುದ್ಧ ನಡೆದ ಏಕದಿನ ಏಷ್ಯಾಕಪ್ ಲೀಗ್ ಪಂದ್ಯಲ್ಲಿ ಸೋಲನುಭವಿಸಿದೆ. ಭಾರತ ನೀಡಿದ್ದ 260 ರನ್ನ ಸ್ಪರ್ಧಾತ್ಮಕ ಗುರಿಯನ್ನು ಪಾಕ್ ತಂಡ 3 ಓವರ್ ಮತ್ತು 8 ವಿಕೆಟ್ ಬಾಕಿ ಉಳಿಸಿಕೊಂಡು ಜಯ ದಾಖಲಿಸಿದೆ. ಇದರಿಂದ ಎ ಗುಂಪಿನಲ್ಲಿ ಪಾಕಿಸ್ತಾನ ತಂಡ ಅಗ್ರಸ್ಥಾನಕ್ಕೇರಿದೆ. ಭಾರತ ಎರಡನೇ ಸ್ಥಾನದಲ್ಲಿದ್ದು, ಮಂಗಳವಾರ ನೇಪಾಳದ ವಿರುದ್ಧ ಭಾರತದ ಕೊನೆಯ ಲೀಗ್ ಪಂದ್ಯದಲ್ಲಿ ಗೆದ್ದರೆ ಸೆಮೀಸ್ ಪ್ರವೇಶ ಪಡೆಯಲಿದೆ.
ಡಿಸೆಂಬರ್ 8 ರಂದು ಅಫ್ಘಾನಿಸ್ತಾನ ತಂಡವನ್ನು 173ಕ್ಕೆ ಆಲ್ಔಟ್ ಮಾಡಿ, 174 ರನ್ಗಳ ಗುರಿಯನ್ನು 7 ವಿಕೆಟ್ಗಳಿಂದ ಭಾರತ ಜಯಿಸಿತ್ತು. ಅದೇ ಉತ್ಸಾಹದಲ್ಲಿ ಮೈದಾನಕ್ಕಿಳಿದ ಭಾರತಕ್ಕೆ ನೇಪಾಳದ ವಿರುದ್ಧ ಜಯ ದಾಖಲಿಸಿದ್ದ ಪಾಕ್ ಸೋಲುಣಿಸಿತು. ಲೀಗ್ ಹಂತದ ಕೊನೆಯ ಪಂದ್ಯವನ್ನು ಗೆದ್ದಲ್ಲಿ ಮತ್ತೆ ಸೆಮೀಸ್ ಹಂತದಲ್ಲಿ ಉಭಯ ತಂಡಗಳು ಮುಖಾಮುಖಿ ಆಗುವ ಸಾಧ್ಯತೆ ಇದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತದ ಯುವ ಆಟಗಾರರು ಸಾಧಾರಣ ಪ್ರದರ್ಶನ ನೀಡಿದರು. ಆದರ್ಶ್ ಸಿಂಗ್ ಉದಯ್ ಸಹರಾನ್ ಮತ್ತು ಸಚಿನ್ ದಾಸ್ ತಲಾ ಅರ್ಧಶತಕದ ಇನ್ನಿಂಗ್ಸ್ ಆಡಿದರು. ಆದರೆ ಭಾರತೀಯ ಯುವ ಪಡೆಯಿಂದ ನಿರೀಕ್ಷಿತ ಪ್ರದರ್ಶನ ಕಂಡು ಬರಲಿಲ್ಲ. ಪಾಕಿಸ್ತಾನದ ವೇಗಿ ಭಾರತದ ಮೇಲೆ ನಿಯಂತ್ರಣ ಹೇರಿದರು. ಇದರಿಂದ ಬೃಹತ್ ಮೊತ್ತ ಕಲೆಹಾಕಲು ಸಾಧ್ಯವಾಗಿಲ್ಲ. 50 ಓವರ್ ಅಂತ್ಯಕ್ಕೆ ಭಾರತ 9 ವಿಕೆಟ್ ನಷ್ಟಕ್ಕೆ 259 ರನ್ ಗಳಿಸಲಷ್ಟೇ ಶಕ್ತವಾಯಿತು.
ಭಾರತಕ್ಕೆ ಕಾಡಿದ ಜೀಶನ್: ಪಾಕ್ ತಂಡದ ಮಧ್ಯಮ ವೇಗದ ಬೌಲರ್ ಮೊಹಮ್ಮದ್ ಜೀಶನ್ ಭಾರತವನ್ನು ಕಾಡಿದರು. 10 ಓವರ್ ಮಾಡಿದ ಮೊಹಮ್ಮದ್ ಜೀಶನ್ 1 ಮೇಡನ್ ಓವರ್ ಜೊತೆಗೆ 4 ವಿಕೆಟ್ ಕಬಳಿಸಿದರು. ರುದ್ರ ಪಟೇಲ್, ಮುಶೀರ್ ಖಾನ್, ಸಚಿನ್ ದಾಸ್ ಮತ್ತು ರಾಜ್ ಲಿಂಬಾನಿ ಅವರ ವಿಕೆಟ್ ಇವರ ಪಾಲಾದವು.
ಪಾಕ್ ಗೆಲ್ಲಿಸಿದ ಅಜಾನ್ ಅವೈಸ್: ಭಾರತ ನೀಡಿದ ಗುರಿಯನ್ನು ಬೆನ್ನತ್ತಿದ ಪಾಕ್ ಶಮಿಲ್ ಹುಸೇನ್ ಅವರ ವಿಕೆಟ್ ಅನ್ನು ಬೇಗ ಕಳೆದುಕೊಂಡಿತು. ಆದರೆ ಎರಡನೇ ವಿಕೆಟ್ಗೆ 110 ರನ್ಗಳ ಜೊತೆಯಾಟವನ್ನು ಶಹಜೈಬ್ ಖಾನ್ ಮತ್ತು ಅಜಾನ್ ಅವೈಸ್ ಮಾಡಿದರು. ಅರ್ಧಶತಕ ಗಳಿಸಿದ ಶಹಜೈಬ್ ಖಾನ್ (63) ವಿಕೆಟ್ ಒಪ್ಪಿಸಿದರು. ಆದರೆ ಮೂರನೇ ವಿಕೆಟ್ಗೆ ಅಜಾನ್ ಅವೈಸ್ ಜೊತೆಗೂಡಿದ ನಾಯಕ ಸಾದ್ ಬೇಗ್ ಅಜೇಯ 125 ರನ್ಗಳ ಪಾಲುದಾರಿಕೆ ಮಾಡಿದರು. ಇದರಿಂದ 2 ವಿಕೆಟ್ ಕಳೆದುಕೊಂಡು 47 ಓವರ್ಗೆ ಪಾಕಿಸ್ತಾನ 260ರನ್ ಗಳಿಸಿ ಗೆಲುವು ದಾಖಲಿಸಿದೆ.
ಅಗ್ರೆಸಿವ್ ಸೆಲೆಬ್ರೇಷನ್ - ಟೀಕೆ: ಪಾಕಿಸ್ತಾನದ ಪರ 4 ವಿಕೆಟ್ ಕಬಳಿಸಿ ಮಿಂಚಿದ ಮೊಹಮ್ಮದ್ ಜೀಶನ್ ಅಗ್ರೆಸಿವ್ ಸೆಲೆಬ್ರೇಷನ್ನಿಂದ ಟೀಕೆಗೆ ಒಳಗಾಗಿದ್ದಾರೆ. ಅಲ್ಲದೇ ಅವರ ಸಂಭ್ರಮಾಚರಣೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಭಾರತ ಬ್ಯಾಟಿಂಗ್ ಮಾಡುವಾಗ ರುದ್ರ ಪಟೇಲ್ ವಿಕೆಟ್ ಕಬಳಿಸಿದ ಮೊಹಮ್ಮದ್ ಜೀಶನ್ ಅಗ್ರೆಸಿವ್ ಆಗಿ ಸಂಭ್ರಮಿಸಿದ್ದಾರೆ. ಅವರ ಜೊತೆಗೆ ಇತರೆ ಆಟಗಾರರು ಮಾಡಿದ ಸಂಭ್ರಮಾಚರಣೆ ಸಾಮಾಜಿಕ ಜಾಲತಾಣದಲ್ಲಿ ಟೀಕೆಗೆ ಗುರಿಯಾಗಿದೆ.
ಇದನ್ನೂ ಓದಿ:ಟಾಸ್ ಗೆದ್ದ ಇಂಗ್ಲೆಂಡ್ ಬ್ಯಾಟಿಂಗ್ ಆಯ್ಕೆ: ಕ್ಲೀನ್ ಸ್ವೀಪ್ನಿಂದ ತಪ್ಪಿಸಿಕೊಳ್ಳುತ್ತಾ ಕೌರ್ ಪಡೆ?