ನವದೆಹಲಿ: ಏಷ್ಯಾ ಕಪ್ 2023 ಗಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಪ್ರಸ್ತಾಪಿಸಿದ ಹೈಬ್ರಿಡ್ ಮಾದರಿಯನ್ನು ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಅನುಮೋದಿಸುವ ಸಾಧ್ಯತೆಯಿದೆ ಮತ್ತು ಶ್ರೀಲಂಕಾವನ್ನು ಭಾರತದ ಪಂದ್ಯಗಳನ್ನು ನಡೆಸಬಹುದಾದ ತಟಸ್ಥ ಸ್ಥಳವೆಂದು ಪರಿಗಣಿಸಬಹುದು ಎಂದು ಹೇಳಲಾಗುತ್ತಿದೆ.
ಪ್ರಸ್ತಾವಿತ ಮಾದರಿಯಲ್ಲಿ, ಶ್ರೀಲಂಕಾದಲ್ಲಿ ನಡೆಯಲಿರುವ ಭಾರತದ ಪಂದ್ಯಗಳನ್ನು ಹೊರತುಪಡಿಸಿ ಪಂದ್ಯಾವಳಿಯ ಎಲ್ಲಾ ಪಂದ್ಯಗಳನ್ನು ಪಾಕಿಸ್ತಾನ ಆಯೋಜಿಸುತ್ತದೆ ಮತ್ತು ಭಾರತ ಅಂತಿಮ ಹಂತ ತಲುಪಿದರೆ ಫೈನಲ್ ಕೂಡ ಶ್ರೀಲಂಕಾದಲ್ಲಿ ನಡೆಯಲಿದೆ. ವಾರಾಂತ್ಯದ ನಂತರ ಅಧಿಕೃತ ಪ್ರಕಟಣೆಯನ್ನು ಬರಲಿದೆ ಎಂದು ನಂಬಲರ್ಹ ಸುದ್ದಿ ಮೂಲವೊಂದು ವರದಿಮಾಡಿದೆ.
ಪ್ರಸ್ತುತ, ಏಷ್ಯಾಕಪ್ ಪಂದ್ಯಾವಳಿಗೆ ಸೆಪ್ಟೆಂಬರ್ 1-17 ರ ನಡುವೆ ದಿನಗಳನ್ನು ಮೀಸಲಿಡಲಾಗಿದೆ. ಪಾಕಿಸ್ತಾನ ತಂಡಕ್ಕೆ ಲಾಹೋರ್‌ನಲ್ಲಿ ಪಂದ್ಯಗಳು ನಡೆಯುವ ಸಾಧ್ಯತೆ ಇದೆ. ಭಾರತ ಮತ್ತು ಪಾಕಿಸ್ತಾನ ಪರಸ್ಪರರ ದೇಶಗಳಿಗೆ ಪ್ರಯಾಣಿಸಲು ಬಯಸುವುದಿಲ್ಲವಾದ್ದರಿಂದ, ಈ ಹೈಬ್ರಿಡ್ ಮಾದರಿಯನ್ನು ಪರಿಹಾರವಾಗಿ ಪ್ರಸ್ತಾಪಿಸಲಾಗಿದೆ.
ಇದಕ್ಕೂ ಮೊದಲು, ಭಾರತವು ಏಷ್ಯಾ ಕಪ್ 2023 ಗಾಗಿ ಪಾಕಿಸ್ತಾನಕ್ಕೆ ಪ್ರಯಾಣಿಸಲು ನಿರಾಕರಿಸಿತ್ತು ಮತ್ತು ಆತಿಥ್ಯ ಹಕ್ಕುಗಳನ್ನು ಉಳಿಸಿಕೊಳ್ಳಲು, ಪಾಕಿಸ್ತಾನವು ಈ ಮಾದರಿಯನ್ನು ಎಸಿಸಿ ಮುಂದೆ ಪ್ರಸ್ತಾಪಿಸಿತ್ತು ಆದರೆ ಇದಕ್ಕೆ ಯಾವುದೇ ನಿರ್ಧಾರಗಳನ್ನು ಎಸಿಸಿ ತೆಗೆದುಕೊಂಡಿರಲಿಲ್ಲ. ಅಲ್ಲದೇ ಎಲ್ಲಾ ಪಂದ್ಯಗಳನ್ನು ಸ್ಥಳಾಂತರ ಮಾಡುವ ಬಗ್ಗೆ ಚಿಂತನೆಗಳು ನಡೆದಿದ್ದವು ಎನ್ನಲಾಗಿತ್ತು.
ಇದನ್ನೂ ಓದಿ:World Cup free on Mobile: ಜಿಯೋ ಸಿನಿಮಾ ಜೊತೆ ಸ್ಪರ್ಧೆಗೆ ಇಳಿದ ಹಾಟ್ಸ್ಟಾರ್, ಏಷ್ಯಾಕಪ್ - ವಿಶ್ವಕಪ್ ಉಚಿತ ವೀಕ್ಷಣೆಗೆ ಅವಕಾಶ
ಬಾಂಗ್ಲಾದೇಶ, ನೇಪಾಳ ಮತ್ತು ಶ್ರೀಲಂಕಾ ದೇಶಗಳು ಸಹ ಪಾಕಿಸ್ತಾನ ಪ್ರವಾಸವನ್ನು ನಿರಾಕರಿಸಿದ್ದವು ಇದರಿಂದ, ಏಷ್ಯಾಕಪ್ನ್ನು ಸಂಪೂರ್ಣವಾಗಿ ಪಾಕಿಸ್ತಾನದಿಂದ ಹೊರಗಡೆ ನಡೆಸುವ ಚಿಂತನೆ ಇದೆ ಎನ್ನಲಾಗಿತ್ತು. ಅಲ್ಲದೇ ಕಳೆದ ವರ್ಷ ಟಿ20 ಮಾದರಿಯ ಏಷ್ಯಾಕಪ್ ಶ್ರೀಲಂಕಾದಲ್ಲಿ ನಡೆಯ ಬೇಕಿತ್ತು ಆದರೆ, ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದ ಲಂಕಾ ಪಂದ್ಯವನ್ನು ನಡೆಸಲು ಸಾಧ್ಯವಿಲ್ಲ ಎಂದಿತ್ತು. ಇದರಿಂದ ಕಳೆದ ವರ್ಷ ಪಂದ್ಯಗಳನ್ನು ದುಬೈನಲ್ಲಿ ನಡೆಸಲಾಗಿತ್ತು.
ಈ ಬಾರಿ ಪಾಕಿಸ್ತಾನದಲ್ಲಿ ಪಂದ್ಯಗಳನ್ನು ನಡೆಸುವುದಿಲ್ಲ ಎಂದಾದಲ್ಲಿ ಶ್ರೀಲಂಕಾದಲ್ಲಿ ಆಡಿಸುವ ಬಗ್ಗೆ ಚರ್ಚಿಸಲಾಗಿತ್ತು. ಅದರಂತೆ ಶ್ರೀಲಂಕಾವು ಪ್ರಸ್ತಾವನೆಯನ್ನು ಎಸಿಸಿ ಮುಂದೆ ಪ್ರಕಟಿಸಿತ್ತು ಎನ್ನಲಾಗಿದೆ. ಆದರೆ ಪಾಕಿಸ್ತಾನ ಇದಕ್ಕೆ ಒಪ್ಪಿಗೆ ನೀಡಿರಲಿಲ್ಲ. ಹಾಗೇ ಪಾಕ್ ಕ್ರಿಕೆಟ್ ಮಂಡಳಿ ಹೈಬ್ರಿಡ್ ಮಾದರಿಯ ಪಂದ್ಯಕ್ಕೆ ಒತ್ತಾಯ ಮಾಡಿತ್ತು.
ಪಿಸಿಬಿ ನಿರ್ವಹಣಾ ಸಮಿತಿಯ ಅಧ್ಯಕ್ಷ ನಜಮ್ ಸೇಥಿ, ಏಷ್ಯಾಕಪ್‌ನ ದೇಶದ ಆತಿಥ್ಯದಲ್ಲಿ ತಲೆದೋರಿರುವ ಬಿಕ್ಕಟ್ಟನ್ನು ಪರಿಹರಿಸಲು ತರ್ಕಬದ್ಧ ವಿಧಾನಕ್ಕಾಗಿ ಕರೆ ನೀಡಿದರು. ಪಿಸಿಬಿ ಹೈಬ್ರಿಡ್ ಮಾದರಿಯನ್ನು ಮುಂದಿಟ್ಟಿದೆ. ಅದರ ಪ್ರಕಾರ ಭಾರತವು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ), ಶ್ರೀಲಂಕಾ, ಬಾಂಗ್ಲಾದೇಶ ಅಥವಾ ಯುನೈಟೆಡ್ ಕಿಂಗ್‌ಡಮ್ (ಯುಕೆ) ಅಥವಾ ಬಾಂಗ್ಲಾದೇಶದಂತಹ ತಟಸ್ಥ ಸ್ಥಳಗಳಲ್ಲಿ ತನ್ನ ಪಂದ್ಯಗಳನ್ನು ಆಡಬಹುದು ಮತ್ತು ಇತರ ಪಂದ್ಯಗಳು ಪಾಕಿಸ್ತಾನದಲ್ಲಿ ನಡೆಯುತ್ತವೆ ಎಂದು ಮಂಡಿಸಿತ್ತು.
ಇದನ್ನೂ ಓದಿ:Shubman Gills Dismissal: ಅಂಪೈರ್ ನಿರ್ಧಾರವನ್ನು ಟ್ರೋಲ್ ಮಾಡಿದ ಸೆಹ್ವಾಗ್, ಜಾಫರ್