ಕಾಬೂಲ್: ಅಂತಾರಾಷ್ಟ್ರೀಯ ಕ್ರಿಕೆಟ್ ಪಟುಗಳಾದ ಮುಜೀಬ್ ಉರ್ ರೆಹಮಾನ್, ಫಜಲ್ ಹಕ್ ಫಾರೂಕಿ ಮತ್ತು ನವೀನ್ ಉಲ್ ಹಕ್ ಮೇಲೆ ವಿಧಿಸಲಾಗಿದ್ದ ಈ ಹಿಂದಿನ ನಿಷೇಧವನ್ನು ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ (ಎಸಿಬಿ) ಪರಿಷ್ಕರಿಸಿದೆ. ಮೂವರು ಆಟಗಾರರಿಂದ ಸ್ಪಷ್ಟನೆ ಪಡೆದಿರುವ ಎಸಿಬಿ, ಈ ಹಿಂದೆ ವಿಧಿಸಿದ್ದ ಎರಡು ವರ್ಷಗಳ ನಿಷೇಧವನ್ನು ಸಂಪೂರ್ಣ ಮಾರ್ಪಡಿಸಿದೆ. ಜೊತೆಗೆ ದೇಶದ ಕರ್ತವ್ಯಗಳಿಗೆ ಬದ್ಧರಾಗಿರಿ ಎಂದು ಸಹ ಎಚ್ಚರಿಕೆ ನೀಡಿದೆ.
ಆಟಗಾರರು ಮೃದು ಧೋರಣೆ ಅನುಸರಿಸಿದ್ದರಿಂದ ಹಾಗೂ ಕೇಂದ್ರ ಒಪ್ಪಂದವನ್ನು ಸ್ವೀಕರಿಸಲು ಇಚ್ಛೆ ವ್ಯಕ್ತಪಡಿಸಿದ್ದರಿಂದ ಈ ನಿರ್ಧಾರಕ್ಕೆ ಬರಲಾಗಿದೆ. ಕೂಲಂಕಷ ತನಿಖೆ ಬಳಿಕ ಆಟಗಾರರಿಗೆ ಅಂತಿಮ ಎಚ್ಚರಿಕೆ ನೀಡಿ ಫ್ರಾಂಚೈಸಿ ಲೀಗ್‌ಗಳಲ್ಲಿ ಭಾಗವಹಿಸಲು ಅನುವು ಮಾಡಿಕೊಡಲಾಗಿದೆ ಎಂದು ಎಸಿಬಿ ತಿಳಿಸಿದೆ. ರಾಷ್ಟ್ರೀಯ ಕರ್ತವ್ಯ ಮತ್ತು ಎಸಿಬಿಯ ಹಿತಾಸಕ್ತಿಗಳ ಬದ್ಧತೆ ಬಗ್ಗೆ ಪ್ರಸ್ತಾಪ ಮಾಡಿರುವ ಎಸಿಬಿ, ಮೂವರು ಆಟಗಾರರ ವೇತನ ಕಡಿತದ ಬಗ್ಗೆಯೂ ಪ್ರಸ್ತಾಪಿಸಿದೆ.
ರಾಷ್ಟ್ರೀಯ ಕರ್ತವ್ಯ ಮತ್ತು ಎಸಿಬಿಯ ಹಿತಾಸಕ್ತಿಗಳಿಗೆ ಆದ್ಯತೆ ನೀಡುವ ಯಾವುದೇ ಆಟಗಾರರಿಗೆ ಸೀಮಿತ ಎನ್‌ಒಸಿಗಳನ್ನು ನೀಡುವುದನ್ನು ಎಸಿಬಿಯು ಕಟ್ಟುನಿಟ್ಟಾಗಿ ಪರಿಗಣಿಸುತ್ತದೆ. ಈ ಆಟಗಾರರು ರಾಷ್ಟ್ರೀಯ ಕರ್ತವ್ಯಗಳಿಗೆ ಬದ್ಧರಾಗಿರುವುದಾಗಿ ಭರವಸೆ ನೀಡಿದ್ದರಿಂದ ಕೊನೆಯ ಎಚ್ಚರಿಕೆ ಜೊತೆಗೆ ಹಾಕಿದ್ದ ನಿಷೇಧವನ್ನು ಕೈಬಿಡಲಾಗಿದೆ. ಆಟಗಾರರು ತಂಡದ ಯಶಸ್ಸಿಗೆ ಬದ್ಧರಾಗಿ ಉಳಿಯುವ ಮೂಲಕ ಅಫ್ಘಾನಿಸ್ತಾನಕ್ಕೆ ಕೀರ್ತಿ ತರುತ್ತಾರೆ ಎಂಬ ಭರವಸೆ ಇದೆ. ಎಸಿಬಿ ಮತ್ತು ನಿಯಮಗಳು ನಮ್ಮೆಲ್ಲರಿಗಿಂತ ಮೇಲು. ನಿಯಮಗಳಿಗೆ ಬದ್ಧವಾಗಿರುವುದು ಮುಖ್ಯ. ಈ ವಿಷಯದಲ್ಲಿ ಯಾರಿಗೂ ಯಾವುದೇ ವಿನಾಯಿತಿಗಳಿಲ್ಲ. ಅಫ್ಘಾನಿಸ್ತಾನವು ಕ್ರಿಕೆಟ್ ಮತ್ತು ಸಂಸ್ಥೆಯ ಪ್ರತಿಷ್ಠೆಗೆ ಆದ್ಯತೆ ನೀಡುವುದರಿಂದ ಇದೇ ರೀತಿಯ ಪ್ರಕರಣಗಳನ್ನು ಹೆಚ್ಚು ಕಟ್ಟುನಿಟ್ಟಾಗಿ ವ್ಯವಹರಿಸಲಾಗುವುದು ಎಂದು ಎಸಿಬಿ ಅಧ್ಯಕ್ಷ ಮಿರ್ವಾಯಿಸ್ ಅಶ್ರಫ್ ಹೇಳಿದ್ದಾರೆ.