ಬೆಂಗಳೂರು: ಕರ್ನಾಟಕದ ವೇಗದ ಬೌಲರ್ ಅಭಿಮನ್ಯು ಮಿಥುನ್ ಪ್ರಥಮ ದರ್ಜೆ ಕ್ರಿಕೆಟ್ಗೆ ನಿವೃತ್ತಿ ಘೋಷಣೆ ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ತಮ್ಮ ಟ್ವಿಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
103 ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯಗಳನ್ನಾಡಿರುವ ಈ ಆಟಗಾರ 338 ವಿಕೆಟ್ ಪಡೆದುಕೊಂಡಿದ್ದಾರೆ. 2010ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದ ಈ ಆಟಗಾರ ಟೀಂ ಇಂಡಿಯಾ ಪರ 4 ಟೆಸ್ಟ್ ಪಂದ್ಯಗಳಿಂದ 9 ವಿಕೆಟ್ ಹಾಗೂ ಐದು ಏಕದಿನ ಪಂದ್ಯಗಳಿಂದ 3 ವಿಕೆಟ್ ಪಡೆದುಕೊಂಡಿದ್ದಾರೆ. 96 ಲಿಸ್ಟ್ A ಪಂದ್ಯಗಳನ್ನಾಡಿರುವ ಈ ಪ್ಲೇಯರ್ 74 ಟಿ-20 ಪಂದ್ಯಗಳನ್ನಾಡಿದ್ದು, 205 ವಿಕೆಟ್ ಪಡೆದುಕೊಂಡಿದ್ದಾರೆ. 2011ರಲ್ಲಿ ವೆಸ್ಟ್ ಇಂಡಿಸ್ ವಿರುದ್ಧ ಕೊನೆಯದಾಗಿ ಏಕದಿನ ಕ್ರಿಕೆಟ್ ಪಂದ್ಯ ಆಡಿದ್ದರು.
ಕರ್ನಾಟಕದಲ್ಲಿ ಅನೇಕ ಪ್ರತಿಭೆಗಳಿದ್ದು, ಅವರಿಗೆ ಅವಕಾಶ ಮಾಡಿಕೊಡುವ ಉದ್ದೇಶದಿಂದ ತಾವು ಈ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿರುವ ಮಿಥುನ್, ನನ್ನ ದೇಶವನ್ನ ಅತ್ಯುನ್ನತ ಮಟ್ಟದಲ್ಲಿ ಪ್ರತಿನಿಧಿಸಿದ್ದು, ಅದು ನನ್ನ ಸಾಧನೆಯಾಗಿದೆ ಎಂದು ಹೇಳಿದ್ದಾರೆ. ಕರ್ನಾಟಕದಲ್ಲಿ ಅತಿ ಹೆಚ್ಚು ವೇಗದ ಬೌಲರ್ಗಳ ಪ್ರತಿಭೆಗಳಿವೆ. ನನ್ನ ವೃತ್ತಿ ಜೀವನ ಮುಂದುವರೆಸಿದರೆ ಬೇರೆ ಪ್ರತಿಭೆಗಳು ಅವಕಾಶ ವಂಚಿತವಾಗುತ್ತವೆ ಎಂದಿದ್ದಾರೆ.
2010ರಲ್ಲಿ ಶ್ರೀಲಂಕಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಪರ ಪದಾರ್ಪಣೆ ಮಾಡಿದ್ದ ಮಿಥುನ್, ಐದು ತಿಂಗಳ ನಂತರ ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಪಂದ್ಯಕ್ಕೂ ಆಯ್ಕೆಯಾಗಿದ್ದರು. ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ 16 ಪಂದ್ಯಗನ್ನಾಡಿರುವ ಈ ಪ್ಲೇಯರ್ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಮುಂಬೈ ಇಂಡಿಯನ್ಸ್ ಹಾಗೂ ಸನ್ರೈಸರ್ಸ್ ಹೈದರಾಬಾದ್ ತಂಡದ ಪರ ಆಡಿದ್ದು, 7 ವಿಕೆಟ್ ಪಡೆದುಕೊಂಡಿದ್ದಾರೆ.