'ಮಿಸ್ಟರ್ 360' ಎಂದೇ ಖ್ಯಾತಿ ಪಡೆದಿರುವ ದಕ್ಷಿಣ ಆಫ್ರಿಕಾ ಕ್ರಿಕೆಟರ್ ಎಬಿ ಡಿವಿಲಿಯರ್ಸ್ ಸ್ಪೋಟಕ, ವಿಭಿನ್ನ ಶೈಲಿಯ ಬ್ಯಾಟಿಂಗ್‌ನಿಂದಲೇ ಅಭಿಮಾನಿಗಳ ಮನಸ್ಸು ಗೆದ್ದವರು. ಅತ್ಯಂತ ವೇಗದ ಶತಕ ಸಿಡಿಸಿದ ದಾಖಲೆಯಿಂದ ಹಿಡಿದು ಸಾಧನೆಯ ಹಲವು ಮೈಲಿಗಲ್ಲುಗಳನ್ನು ತಲುಪಿದ ಶ್ರೇಯ ಹೊಂದಿರುವ ಅಪರೂಪದ ಕ್ರಿಕೆಟ್ ದಿಗ್ಗಜ ಕೂಡಾ. ಅಂತಾರಾಷ್ಟೀಯ ಮಟ್ಟದಲ್ಲಿ ಮಾತ್ರವಲ್ಲದೇ ಡೊಮೆಸ್ಟಿಕ್ ಕ್ರಿಕೆಟ್ ಪಂದ್ಯಗಳಲ್ಲೂ ಎಬಿಡಿ ಅಬ್ಬರಿಸಿದವರು. ಅದರಲ್ಲೂ ಆರ್ಸಿಬಿಯ ಭರವಸೆಯ ಆಟಗಾರರಾಗಿದ್ದ ಇವರು 2021ರ ಐಪಿಎಲ್ ಆವೃತ್ತಿಯ ನಂತರ ನಿವೃತ್ತಿ ಘೋಷಿಸಿದ್ದರು. ಇತ್ತೀಚೆಗೆ ತಂಡಕ್ಕೆ ವಿಶೇಷ ಕೊಡುಗೆ ನೀಡಿದ್ದ ಕ್ರಿಸ್ ಗೇಲ್ ಮತ್ತು ಎಬಿಡಿಗೆ 'ಹಾಲ್ ಆಫ್ ಫೇಮ್' ನೀಡಿ ಗೌರವಿಸಲಾಗಿತ್ತು.
ಆರ್‌ಸಿಬಿ ಹಾಲ್ ಆಫ್ ಫೇಮ್‌ಗೆ ಸೇರ್ಪಡೆಗೊಂಡ ನಂತರ ಮಾಜಿ ಕ್ರಿಕೆಟರ್ ಎಬಿಡಿ, ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕ ಸಂದೇಶವೊಂದನ್ನು ಪೋಸ್ಟ್ ಮಾಡಿದ್ದಾರೆ. ಈ ಸಂದೇಶದಲ್ಲಿ ಆರ್‌ಸಿಬಿ ತಂಡ ಮತ್ತು ತಮ್ಮ ಜರ್ಸಿ ಸಂಖ್ಯೆಯನ್ನು ನಿವೃತ್ತಿಗೊಳಿಸಿದ್ದಕ್ಕಾಗಿ ಫ್ರಾಂಚೈಸಿಗೆ ಧನ್ಯವಾದ ಅರ್ಪಿಸಿದ್ದಾರೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಆರ್‌ಸಿಬಿ ಅನ್‌ಬಾಕ್ಸ್ ಸಮಾರಂಭದಲ್ಲಿ, ವೆಸ್ಟ್ ಇಂಡೀಸ್ ದಂತಕಥೆ ಕ್ರಿಸ್ ಗೇಲ್ ಅವರೊಂದಿಗೆ ಎಬಿ ಡಿವಿಲಿಯರ್ಸ್ ಅವರನ್ನು ಹಾಲ್ ಆಫ್ ಫೇಮ್‌ಗೆ ಸೇರಿಸಿಕೊಳ್ಳುವ ಮೂಲಕ ಫ್ರಾಂಚೈಸಿ ವಿಶೇಷವಾಗಿ ಗೌರವಿಸಿದೆ. ತಂಡಕ್ಕೆ ಈ ಇಬ್ಬರು ಆಟಗಾರರು ನೀಡಿರುವ ಕೊಡುಗೆಗೆ ಗೌರವ ಸೂಚಿಸಿದ ಬೆಂಗಳೂರು ಮೂಲದ ಆರ್‌ಸಿಬಿ ಫ್ರಾಂಚೈಸಿ, ಡಿವಿಲಿಯರ್ಸ್ ಅವರ ಜೆರ್ಸಿ ಸಂಖ್ಯೆ 17 ಮತ್ತು ಕ್ರಿಸ್ ಗೇಲ್ ಅವರ ಜೆರ್ಸಿ ಸಂಖ್ಯೆ 333ರನ್ನು ನಿವೃತ್ತಿಗೊಳಿಸಿದೆ. ಈ ಬಗ್ಗೆ ನಿನ್ನೆ ಎಬಿ ಡಿವಿಲಿಯರ್ಸ್ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಭಾವನಾತ್ಮಕ ಸಂದೇಶವೊಂದನ್ನು ಹಂಚಿಕೊಂಡಿದ್ದಾರೆ.
"ಮಾರ್ಚ್ 26, 2023 ರಂದು ಕ್ರಿಸ್ ಗೇಲ್ ಮತ್ತು ನಾನು ಆರ್‌ಸಿಬಿ ಹಾಲ್ ಆಫ್ ಫೇಮ್‌ಗೆ ಸೇರ್ಪಡೆಗೊಂಡೆವು. ನನ್ನ ಪತ್ನಿ, ಮೂವರು ಮಕ್ಕಳೊಂದಿಗೆ ಆರ್‌ಸಿಬಿ ವೇದಿಕೆಯ ಮೆಟ್ಟಿಲುಗಳ ಮೇಲೆ ನಡೆದಾಗ ನನ್ನ ಹೃದಯ ತುಂಬಿ ಬಂತು. ಈ ಹಿಂದೆ ನಾನು ಹಲವು ಬಾರಿ ಇದೇ ಮೆಟ್ಟಿಲುಗಳ ಮೇಲೆ ನಡೆದಿದ್ದೆ. ಆದರೆ ಈ ಬಾರಿ ಆ ಮೆಟ್ಟಿಲುಗಳ ಮೇಲೆ ನಡೆದ ಅನುಭವವೇ ವಿಭಿನ್ನವಾಗಿತ್ತು".