ಅಬು ಧಾಬಿ : ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಸೋಮವಾರ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಆಡುವ ಮೂಲಕ ಒಂದೇ ಫ್ರಾಂಚೈಸಿಯಲ್ಲಿ 200 ಪಂದ್ಯವನ್ನಾಡಿದ ವಿಶ್ವದ ಮೊದಲ ಕ್ರಿಕೆಟಿಗ ಎಂಬ ವಿಶ್ವದಾಖಲೆಗೆ ಪಾತ್ರರಾದರು.
ಈ ಪಂದ್ಯಕ್ಕೂ ಮುನ್ನ ಆರ್ಸಿಬಿ ಡೆಬ್ಯೂಟ್ ಮಾಡಿದ ವನಿಂದು ಹಸರಂಗ ಮತ್ತು ವಿಕೆಟ್ ಕೀಪರ್ ಕೆ ಎಸ್ ಭರತ್ ಅವರಿಗೆ ಕ್ಯಾಪ್ ನೀಡಿದರೆ, 2008ರಿಂದಲೂ ಆರ್ಸಿಬಿ ಪರ ಆಡಿಕೊಂಡು ಬಂದಿರುವ ಕೊಹ್ಲಿಯ 200 ಪಂದ್ಯಗಳ ಸವಿನೆನಪಿಗಾಗಿ 200 ಸಂಖ್ಯೆಯುಳ್ಳ ಜರ್ಸಿಯನ್ನು ಉಡುಗೊರೆಯಾಗಿ ನೀಡಲಾಯಿತು. ವಿಶೇಷವೆಂದರೆ ಈ ಜರ್ಸಿಯನ್ನು ಸ್ಪೋಟಕ ಬ್ಯಾಟ್ಸ್ಮನ್ ಹಾಗೂ ವಿರಾಟ್ ನೆಚ್ಚಿನ ಸ್ನೇಹಿತನಾದ ಎಬಿಡಿ ವಿಲಿಯರ್ಸ್ ನೀಡಿದರು.
ನಿನ್ನೆ ನಡೆದ ಪಂದ್ಯ ಕೊಹ್ಲಿ ಪಾಲಿಗೆ ವಿಶೇಷವಾದರೂ, ಫಲಿತಾಂಶ ಬಹಳ ಹೀನಾಯವಾಗಿತ್ತು. ಕೊಹ್ಲಿ ಕೇವಲ 5 ರನ್ಗಳಿಸಿ ಪ್ರಸಿಧ್ ಕೃಷ್ಣಾಗೆ ವಿಕೆಟ್ ಒಪ್ಪಿಸಿದರೆ, ಆರ್ಸಿಬಿ ಕೇವಲ 92 ರನ್ಗಳಿಗೆ ಆಲೌಟ್ ಆಗಿ ಹೀನಾಯ ಬ್ಯಾಟಿಂಗ್ ಪ್ರದರ್ಶನ ತೋರಿತು. ದೇವದತ್ ಪಡಿಕ್ಕಲ್(22) ಮಾತ್ರ 20ರ ಗಡಿ ದಾಟಿದ ಏಕೈಕ ಬ್ಯಾಟ್ಸ್ಮನ್.
ಚೊಚ್ಚಲ ಐಪಿಎಲ್ನಿಂದಲೂ ಆರ್ಸಿಬಿ ಪರ ಆಡುತ್ತಿರುವ ಕೊಹ್ಲಿ, ಒಂದೇ ತಂಡದ ಪರ 200 ಪಂದ್ಯಗಳನ್ನಾಡಿದ ಮೊದಲ ಕ್ರಿಕೆಟಿಗ ಎಂಬ ದಾಖಲೆ ಬರೆದಿದ್ದಾರೆ.