ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ ಟೂರ್ನಿಯು ಅಂತಿಮ ಹಂತದತ್ತ ಸಾಗುತ್ತಿದೆ. ಇಂದಿನಿಂದ ಸೆಮಿಫೈನಲ್ ಪಂದ್ಯಗಳು ಆರಂಭವಾಗಲಿವೆ. ಈಗಾಗಲೇ ಹಲವು ಕ್ರಿಕೆಟ್ ದಿಗ್ಗಜರು, ಕ್ರೀಡಾ ವಿಶ್ಲೇಷಕರು ಪ್ರಶಸ್ತಿ ಗೆಲ್ಲುವ ತಮ್ಮ ಫೆವರಿಟ್ ತಂಡಗಳ ಬಗ್ಗೆ ಮಾತನಾಡಿದ್ದಾರೆ. ಸದ್ಯ ದಕ್ಷಿಣ ಆಫ್ರಿಕಾದ ಮಾಜಿ ಬ್ಯಾಟರ್ ಎಬಿ ಡಿವಿಲಿಯರ್ಸ್ ಕೂಡ ಫೈನಲ್ ಎದುರಾಳಿಗಳು ಹಾಗೂ ಚಾಂಪಿಯನ್ ಯಾರಾಗಲಿದ್ದಾರೆ ಎಂಬ ಬಗ್ಗೆ ಭವಿಷ್ಯ ನುಡಿದಿದ್ದಾರೆ.
ಎಬಿ ಡಿವಿಲಿಯರ್ಸ್ ಪ್ರಕಾರ ಫೈನಲ್‌ನಲ್ಲಿ ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳು ಎದುರಾಗಲಿವೆ. ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಟ್ರೋಫಿ ಎತ್ತಿ ಹಿಡಿಯಲಿದೆ. "ಭಾರತ ಮತ್ತು ನ್ಯೂಜಿಲೆಂಡ್ ಫೈನಲ್‌ನಲ್ಲಿ ಆಡಲಿವೆ ಹಾಗೂ ಭಾರತ ಚಾಂಪಿಯನ್ ಪಟ್ಟ ಅಲಂಕರಿಸಲಿದೆ ಎಂದು ನಾನು ಭಾವಿಸುತ್ತೇನೆ" ಎಂದು ಸುದ್ದಿಸಂಸ್ಥೆಯೊಂದಕ್ಕೆ ಪ್ರತಿಕ್ರಿಯಿಸಿದ್ದಾರೆ.
ಭಾರತ ತಂಡದ ಆಟಗಾರರ ಫಾರ್ಮ್ ಕುರಿತು ಮಾತನಾಡಿದ ಡಿವಿಲಿಯರ್ಸ್, "ತಂಡದ ಎಲ್ಲರೂ ಉತ್ತಮವಾಗಿ ಆಡುತ್ತಿದ್ದಾರೆ. ಸೂರ್ಯಕುಮಾರ್ ಯಾದವ್ ಭರ್ಜರಿ ಫಾರ್ಮ್‌ನಲ್ಲಿದ್ದಾರೆ, ವಿರಾಟ್ ಕೂಡ ಉತ್ತಮವಾಗಿ ಆಡುತ್ತಿದ್ದಾರೆ. ರೋಹಿತ್ ಅವರಿಂದ ರನ್ ಬಂದಿಲ್ಲ, ಆದರೆ ಅವರೂ ಕೂಡ ಲಯಕ್ಕೆ ಮರಳಲಿದ್ದಾರೆ. ರೋಹಿತ್ ಅದ್ಭುತ ಆಟಗಾರ, ಭಾರತದ ಸಂಪೂರ್ಣ ಬ್ಯಾಟಿಂಗ್ ವಲಯವೇ ಪ್ರತಿಭಾನ್ವಿತರಿಂದ ಕೂಡಿದೆ. ಇಂಗ್ಲೆಂಡ್ ವಿರುದ್ಧ ಉತ್ತಮ ಆಟವನ್ನು ನಾನು ಎದುರು ನೋಡುತ್ತಿದ್ದೇನೆ. ಇದೊಂದು ದೊಡ್ಡ ಪರೀಕ್ಷೆ. ಭಾರತ ಸೆಮಿಫೈನಲ್‌ನಲ್ಲಿ ಗೆದ್ದರೆ, ಟ್ರೋಫಿ ಎತ್ತಿಹಿಡಿಯಲಿದೆ" ಎಂದು ಹೇಳಿದ್ದಾರೆ.
ಸಿಡ್ನಿ ಕ್ರಿಕೆಟ್ ಮೈದಾನದಲ್ಲಿಂದು ಮೊದಲ ಸೆಮಿಫೈನಲ್ ಕದನದಲ್ಲಿ ನ್ಯೂಜಿಲೆಂಡ್ ಮತ್ತು ಪಾಕಿಸ್ತಾನ ತಂಡಗಳು ಆಡಲಿವೆ. ಭಾರತ-ಇಂಗ್ಲೆಂಡ್ ನಡುವಿನ ಎರಡನೇ ಸೆಮಿಫೈನಲ್ ಗುರುವಾರ ಅಡಿಲೇಡ್‌ನಲ್ಲಿ ನಡೆಯಲಿದೆ. ಪ್ರಶಸ್ತಿ ಸುತ್ತಿನ ಹಣಾಹಣಿಯು ನ.13ರಂದು ಮೆಲ್ಬೋರ್ನ್ನಲ್ಲಿದೆ.
ಇದನ್ನೂ ಓದಿ:ಸೆಮಿಫೈನಲ್ಗೂ ಮುನ್ನ ಇಂಗ್ಲೆಂಡ್ಗೆ ಶಾಕ್.. ಶರವೇಗದ ಬೌಲರ್ ಮಾರ್ಕ್ವುಡ್ಗೆ ಗಾಯ