ಮುಂಬೈ:ಭಾರತ ತಂಡವನ್ನು ಬಿ ಟೀಮ್ ಎಂದು ಕರೆದಿದ್ದನ್ನು ಗಂಭೀರವಾಗಿ ಪರಿಗಣಿಸಿ ಭಾರತೀಯ ಬ್ಯಾಟ್ಸ್ಮನ್ಗಳು ಅಬ್ಬರದ ಬ್ಯಾಟಿಂಗ್ ಪ್ರದರ್ಶನ ತೋರಿರಬೇಕೆಂದು ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಲಂಕಾ ತಂಡದ ಮಾಜಿ ನಾಯಕ ಅರ್ಜುನ್ ರಣತುಂಗಾ ಅವರ ಕಾಲೆಳೆದಿದ್ದಾರೆ.
ಭಾರತ ಮತ್ತು ಏಕದಿನ ಸರಣಿ ಆರಂಭಕ್ಕೂ ಮುನ್ನ ರಣತುಂಗಾ, ಬಿಸಿಸಿಐ ಭಾರತದ ದ್ವಿತೀಯ ದರ್ಜೆ ತಂಡವನ್ನು ಕಳುಹಿಸಿ ಶ್ರೀಲಂಕಾ ಕ್ರಿಕೆಟ್ ಮಂಡಳಿಗೆ ಅವಮಾನ ಮಾಡಿದೆ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆಯನ್ನು ಭಾರತೀಯ ಅಭಿಮಾನಿಗಳು ಮತ್ತು ಮಾಜಿ ಕ್ರಿಕೆಟಿಗರು ತೀವ್ರವಾಗಿ ಖಂಡಿಸಿದ್ದರು. ಭುವನೇಶ್ವರ್, ಧವನ್, ಪಾಂಡ್ಯ ಬ್ರದರ್ಸ್, ಕುಲ್ದೀಪ್, ಚಹಲ್ ಅಂತಹ ಆಟಗಾರರಿರುವ ಭಾರತ ತಂಡವನ್ನು ದ್ವೀತಿಯ ದರ್ಜೆ ತಂಡ ಎನ್ನುವುದಕ್ಕೂ ಮೊದಲು ಪ್ರಸ್ತುತ ಶ್ರೀಲಂಕಾ ತಂಡದಲ್ಲಿರುವ ಆಟಗಾರರಿಗೆ ಎಷ್ಟು ಅನುಭವವಿದೆ ಎಂದು ಮೊದಲು ಹೋಲಿಕೆ ಮಾಡಿ ಎಂದು ಕಿಡಿಕಾರಿದ್ದರು.
ಇದೀಗ ಭಾನುವಾರ ನಡೆದ ಮೊದಲ ಪಂದ್ಯದಲ್ಲಿ ಶ್ರೀಲಂಕಾ ತಂಡ ನೀಡಿದ್ದ 263 ರನ್ಗಳ ಗುರಿಯನ್ನು ಇನ್ನೂ 13.2 ಓವರ್ಗಳಿರುವಂತೆ ಗೆಲ್ಲುವ ಮೂಲಕ ಭಾರತ ತಂಡದ ಪ್ರಾಬಲ್ಯ ಮೆರೆದಿತ್ತು. ಮೊದಲ ಪಂದ್ಯದ ವಿಶ್ಲೇಷಣೆ ಮಾಡುವ ಸಂದರ್ಭದಲ್ಲಿ ಆಕಾಶ್ ಚೋಪ್ರಾ, ಅರ್ಜುನ್ ರಣತುಂಗಾ ಅವರ ಹೇಳಿಕೆ ಭಾರತೀಯ ಆಟಗಾರರ ಹೃದಯಕ್ಕೆ ತಾಗಿರಬಹುದು ಎಂದು ಕಿಚಾಯಿಸಿದ್ದಾರೆ.