ಹೈದರಾಬಾದ್:ಭಾರತ ವಿಶ್ವಕಪ್ ವಿಜೇತ ಮಾಜಿ ನಾಯಕ ಕಪಿಲ್ ದೇವ್ ಅವರ ಕೈ ಮತ್ತು ಬಾಯನ್ನು ಕಟ್ಟಿ ಕಿಡ್ನಾಪ್ ಮಾಡುತ್ತಿರುವ ವಿಡಿಯೋ ನಿನ್ನೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿ ತುಂಬಾ ಸದ್ದು ಮಾಡಿತ್ತು. ಈ ವಿಡಿಯೋವನ್ನು ಭಾರತದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಮತ್ತು ಹರ್ಷ ಭೋಗ್ಲೆ ಶೇರ್ ಮಾಡಿಕೊಂಡಿದ್ದರು. ಈಗ ಈ ತುಣುಕಿನ ಅಸಲಿಯತ್ತು ಬಯಲಾಗಿದೆ. ವಿಡಿಯೋವನ್ನು ದೇಶದಲ್ಲಿ ನಡೆಯಲಿರುವ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಪ್ರಚಾರಕ್ಕಾಗಿ ಚಿತ್ರೀಕರಿಸಲಾಗಿದೆ ಎಂದು ಭಾರತದ ಮಾಜಿ ಆರಂಭಿಕ ಆಟಗಾರ ಗೌತಮ್ ಗಂಭೀರ್ ಮಂಗಳವಾರ ಸ್ಪಷ್ಟಪಡಿಸಿದ್ದಾರೆ.
ಗೌತಮ್ ಗಂಭೀರ್ ಸೋಮವಾರ ತಮ್ಮ ಎಕ್ಸ್ ಪ್ರೊಫೈಲ್‌ನಲ್ಲಿ ಕಪಿಲ್ ದೇವ್ ಕುರಿತು ಗೊಂದಲಮಯ ವಿಡಿಯೋವನ್ನು ಹಂಚಿಕೊಂಡಿದ್ದರು, "ಈ ಕ್ಲಿಪ್ ಅನ್ನು ಬೇರೆ ಯಾರಾದರೂ ಸ್ವೀಕರಿಸಿದ್ದಾರೆಯೇ? ಇದು ನಿಜವಾಗಿ ಕಪಿಲ್ ದೇವ್ ಅಲ್ಲ ಎಂದು ಭಾವಿಸುತ್ತೇವೆ. ಕಪಿಲ್ ಪಾಜಿ ಚೆನ್ನಾಗಿದ್ದಾರೆ ಎಂದು ಭಾವಿಸುತ್ತೇವೆ" ಎಂದು ಬರೆದುಕೊಂಡಿದ್ದರು. ಆ ವಿಡಿಯೋದಲ್ಲಿ ಕಪಿಲ್ ದೇವ್ ಅವರ ರೀತಿ ಕಾಣುವ ವ್ಯಕ್ತಿಯ ಕೈಗಳನ್ನು ಬಂಧಿಸಿ, ಒಂದು ಕೋಣೆ ಒಳಗೆ ಕರೆದುಕೊಂಡು ಹೋಗಲಾಗುತ್ತಿತ್ತು. ನಿನ್ನೆ ಶೇರ್ ಮಾಡಿಕೊಂಡಿದ್ದ ವಿಡಿಯೋಗೆ ಸಂಬಂಧಿಸಿದಂತೆ ಗಂಭೀರ್ ಇಂದು ಸ್ಪಷ್ಟನೆ ನೀಡಿದ್ದಾರೆ.
ಆದರೆ ನಿನ್ನೆ ಗಂಭೀರ್ ಶೇರ್ ಮಾಡಿಕೊಂಡಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ವೈರಲ್ ಆಗಿತ್ತು. ಭಾರತದ ಕ್ರಿಕೆಟ್ ಅಭಿಮಾನಿಗಳು ಈ ವಿಡಿಯೋದ ಬಗ್ಗೆ ಆತಂಕವನ್ನು ವ್ಯಕ್ತ ಪಡಿಸಿದ್ದರು. ಇದನ್ನು ಕೆಲವರು ಜಾಹೀರಾತಿಗಾಗಿ ಮಾಡಲಾದ ಗಿಮಿಕ್ ಎಂದು ಹಳಿದಿದ್ದರು. ಈಗ ವೀಡಿಯೊದ ನೈಜತೆ ನೆಟಿಜನ್‌ಗಳನ್ನು ಆಶ್ಚರ್ಯ ಪಡುವಂತೆ ಮಾಡಿದೆ.