ತರೊಬಾ(ವೆಸ್ಟ್ ಇಂಡೀಸ್):ಚುಟುಕು ಕ್ರಿಕೆಟ್ನಲ್ಲಿ ಬಲಾಢ್ಯರು ಎಂದೇ ಗುರುತಿಸಿಕೊಂಡ ವೆಸ್ಟ್ ಇಂಡೀಸ್ ತಂಡ, ಭಾರತ ವಿರುದ್ಧದ ಮೊದಲ ಟಿ-20ಯಲ್ಲಿ ಹೀನಾಯ ಸೋಲು ಅನುಭವಿಸಿದ್ದಾರೆ. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತ ನೀಡಿದ 190 ರನ್ ಗುರು ಬೆನ್ನಟ್ಟಿ ಕೇವಲ 122 ಗಳಿಸಿ 68 ರನ್ಗಳ ಸೋಲೊಪ್ಪಿಕೊಂಡಿತು. ಈ ಮೂಲಕ 5 ಪಂದ್ಯಗಳ ಸರಣಿಯಲ್ಲಿ ಭಾರತ 1-0 ಮುನ್ನಡೆ ಪಡೆಯಿತು.
ಸ್ಪಿನ್ನರ್ಗಳ ಕರಾಮತ್ತು:ನಿಧಾನಗತಿಯ ಪಿಚ್ನ ಲಾಭ ಪಡೆದ ಭಾರತೀಯ ಸ್ಪಿನ್ನರ್ಗಳು ವೆಸ್ಟ್ ಇಂಡೀಸ್ ಆಟಗಾರರು ಪೆವಿಲಿಯನ್ ಪರೇಡ್ ನಡೆಸುವಂತೆ ಮಾಡಿದರು. ಇದಕ್ಕೆ ಸಾಕ್ಷಿ ಎಂಬಂತೆ ತಂಡದ ಯಾವೊಬ್ಬ ಆಟಗಾರನೂ 20 ಕ್ಕೂ ಅಧಿಕ ರನ್ ಗಳಿಸುವಲ್ಲಿ ಸಫಲವಾಗಲಿಲ್ಲ.
ಏಕದಿನ ಸರಣಿಯಲ್ಲಿ ಮಿಂಚಿದ್ದ ಆಲ್ರೌಂಡರ್ ಕೈಲ್ ಮೇಯರ್ಸ್ ಮಿಂಚಿನ ಆರಂಭ ಪಡೆದರು. 1 ಸಿಕ್ಸ್ 2 ಬೌಂಡರಿ ಬಾರಿಸಿ ಅಪಾಯಕಾರಿಯಾಗುವ ಮುನ್ಸೂಚನೆ ನೀಡಿದರು. ಆದರೆ, ಇದಕ್ಕೆ ಅರ್ಷದೀಪ್ ಸಿಂಗ್ ಅವಕಾಶ ಮಾಡಿಕೊಡದೇ 15 ರನ್ಗೆ ಕಟ್ಟಿ ಹಾಕಿದರು. ಆಮ್ರಾಹ್ ಬ್ರೂಕ್ಸ್ 20 ರನ್ ಗಳಿಸಿದ್ದೇ ತಂಡದ ಆಟಗಾರರ ಅತ್ಯಧಿಕ ಮೊತ್ತವಾಗಿದೆ.
ಜಾಸನ್ ಹೋಲ್ಡರ್ ಸೊನ್ನೆ ಸುತ್ತಿದರೆ, ನಾಯಕ ನಿಕೋಲಸ್ ಪೂರನ್ 18, ರೋವಮನ್ ಪೊವೆಲ್14, ಶಿಮ್ರಾನ ಹೆಟ್ಮಾಯಿರ್ 14, ಅಕೀಲ್ ಹುಸೈನ್ 11 ಕೀಮೋ ಪೌಲ್ 19 ರನ್ ಗಳಿಸಿದರು. ತಂಡ 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡ 122 ರನ್ ಗಳಿಸಿಲಷ್ಟೇ ಸಾಧ್ಯವಾಯಿತು.
ತ್ರಿವಳಿ ಸ್ಪಿನ್ನರ್ಗಳಾದ ಆರ್.ಅಶ್ವಿನ್, ರವಿ ಬಿಷ್ಣೋಯಿ ತಲಾ 2 ವಿಕೆಟ್ ಪಡೆದರೆ, ರವೀಂದ್ರ ಜಡೇಜಾ 1, ಅರ್ಷದೀಪ್ ಸಿಂಗ್ 2, ಭುವನೇಶ್ವರ್ ಕುಮಾರ್ 1 ವಿಕೆಟ್ ಪಡೆದು ಗೆಲುವಿನ ಶಾಸ್ತ್ರ ಮುಗಿಸಿದರು.