ಆರಂಭಿಕ ಆಟಗಾರ ಶಿಖರ್ ಧವನ್ ಹಲವು ತಿಂಗಳ ನಂತರ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ. ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿನ ಗೆಲುವಿನ ಬಳಿಕ ಅವರು, ನಾಯಕ ರೋಹಿತ್ ಶರ್ಮಾ ಜೊತೆ ಮೈದಾನಕ್ಕಿಳಿಯುವ ಬಗ್ಗೆ ಟ್ವೀಟ್ ಮಾಡಿದ್ದು, ಇಬ್ಬರ ನಡುವಿನ ಬಾಂಧವ್ಯ ಇನ್ನೂ ಗಟ್ಟಿಯಾಗಿದೆ ಎಂದಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಮಂಗಳವಾರ ಗೆಲುವಿನ ಮೂಲಕ ಶುಭಾರಂಭ ಮಾಡಿದೆ. 111 ರನ್ ಗುರಿ ಬೆನ್ನಟ್ಟಿದ ಭಾರತ 10 ವಿಕೆಟ್ ಅಂತರದ ಜಯ ಸಾಧಿಸಿತು. ರೋಹಿತ್ (76*) ಮತ್ತು ಶಿಖರ್ (31*) ಅಜೇಯ 114 ರನ್‌ಗಳ ಆರಂಭಿಕ ಜೊತೆಯಾಟದ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು.
ಈ ವಿಜಯದ ಬಳಿಕ ಟ್ವೀಟ್ ಮಾಡಿರುವ ಧವನ್, '9 ವರ್ಷಗಳ ನಂತರವೂ ನಮ್ಮ ನಡುವಿನ ಬಾಂಧವ್ಯ ಇನ್ನೂ ಗಟ್ಟಿಯಾಗಿದೆ. ಅದ್ಭುತ ವಿಜಯಕ್ಕಾಗಿ ಟೀಮ್ ಇಂಡಿಯಾಕ್ಕೆ ಅಭಿನಂದನೆಗಳು' ಎಂದು ಸಂತಸ ಹಂಚಿಕೊಂಡಿದ್ದಾರೆ.
ಆರಂಭಿಕರ ದಾಖಲೆ:ಈ ಜೋಡಿ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ 5,000 ರನ್ ಬಾರಿಸಿದ ನಾಲ್ಕನೇ ಆರಂಭಿಕ ಜೋಡಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 2013ರಲ್ಲಿ ಇಂಗ್ಲೆಂಡ್‌ನಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ರೋಹಿತ್ ಮತ್ತು ಶಿಖರ್ ಚೊಚ್ಚಲ ಬಾರಿಗೆ ಭಾರತಕ್ಕೆ ಇನ್ನಿಂಗ್ಸ್ ಆರಂಭಿಸಿದ್ದರು. ಬಳಿಕ ಇಬ್ಬರೂ 50 ಓವರ್ಗಳ ಮಾದರಿಯಲ್ಲಿ ಸ್ಫೋಟಕ ಆರಂಭಿಕ ಜೋಡಿಗಳಲ್ಲೊಂದಾಗಿ ಹೊರಹೊಮ್ಮಿದ್ದಾರೆ.
ರೋಹಿತ್ ಮತ್ತು ಶಿಖರ್ ಅವರು ಸಚಿನ್ ತೆಂಡೂಲ್ಕರ್ ಮತ್ತು ಸೌರವ್ ಗಂಗೂಲಿ ಬಳಿಕ ಏಕದಿನದಲ್ಲಿ 5,000 ರನ್ ಗಡಿ ದಾಟಿದ ಎರಡನೇ ಭಾರತೀಯ ಆರಂಭಿಕ ಜೋಡಿಯಾಗಿದ್ದಾರೆ. 1996ರಿಂದ 2007ರ ಅವಧಿಯಲ್ಲಿ ತಂಡದ ಆರಂಭಿಕರಾಗಿದ್ದ ತೆಂಡೂಲ್ಕರ್ ಮತ್ತು ಗಂಗೂಲಿ 6,609 ರನ್ ಗಳಿಸಿದ್ದು, 21 ಶತಕ ಮತ್ತು 23 ಅರ್ಧಶತಕಗಳ ಪಾಲುದಾರಿಕೆಯ ಭಾಗವಾಗಿದ್ದಾರೆ.
ಇಂಗ್ಲೆಂಡ್ ವಿರುದ್ಧ ಗೆಲುವಿನ ಬಳಿಕ ಮಾತನಾಡಿದ್ದ ರೋಹಿತ್, ಧವನ್ ಮತ್ತು ನಾನು ಒಟ್ಟಿಗೆ ಸಾಕಷ್ಟು ಕ್ರಿಕೆಟ್ ಆಡಿದ್ದೇವೆ. ನಾವು ಒಬ್ಬರನ್ನೊಬ್ಬರು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದೇವೆ. ಶಿಖರ್ ಬಹಳ ಸಮಯದ ನಂತರ ಏಕದಿನ ಕ್ರಿಕೆಟ್ ಆಡುತ್ತಿದ್ದಾರೆ. ತಂಡಕ್ಕೆ ಅವರ ಅಗತ್ಯತೆ ಏಷ್ಟಿದೆ ಎಂಬುದರ ಬಗ್ಗೆ ನಮಗೆ ತಿಳಿದಿದೆ. ಅನುಭವಿ ಆಟಗಾರ ಮತ್ತು ಈ ಹಿಂದೆ ಇಂಗ್ಲೆಂಡ್‌ನಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ ಎಂದು ಜೊತೆಗಾರನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ:ಮಾರಕ ಬೌಲಿಂಗ್ ಮೂಲಕ ಶಮಿ ಹೊಸ ದಾಖಲೆ... ಈ ರೆಕಾರ್ಡ್ ಬರೆದ ಮೊದಲ ಭಾರತೀಯ