ಕೊಲಂಬೊ: ಇಲ್ಲಿನ ಆರ್.ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಸರಣಿಯ ಐದನೇ ಪಂದ್ಯದಲ್ಲಿ ಆಸಿಸ್ ಪಡೆ ಲಂಕಾ ವಿರುದ್ಧ ನಾಲ್ಕು ವಿಕೆಟ್ಗಳಿಂದ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಸರಣಿ ಸೋಲಿನ ಅಂತರವನ್ನು 3-2ಕ್ಕೆ ಇಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಕೊನೆಯ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ್ದ ಶ್ರೀಲಂಕಾ ತಂಡದ ಬ್ಯಾಟರ್‌ಗಳು ಸಂಪೂರ್ಣವಾಗಿ ವಿಫಲವಾದರು. ಆಸ್ಟ್ರೇಲಿಯಾದ ಬೌಲಿಂಗ್ ದಾಳಿಗೆ ನಲುಗಿದ ಶ್ರೀಲಂಕಾ ಕ್ರೀಸ್‌ನಲ್ಲಿ ನೆಲೆಯೂರಲು ವಿಫಲವಾಯಿತು. ಯಾರೂ ಕೂಡಾ ಹೆಚ್ಚಿನ ಮೊತ್ತ ಗಳಿಸಲು ಸಫಲವಾಗಲೇ ಇಲ್ಲ. ಶ್ರೀಲಂಕಾ ತಂಡಕ್ಕೆ ಅಗತ್ಯವಾಗಿದ್ದ ಜೊತೆಯಾಟ ಕೂಡ ದೊರೆಯಲಿಲ್ಲ. ಇದರ ಪರಿಣಾಮವಾಗಿ ಶ್ರೀಲಂಕಾ 85 ರನ್‌ಗಳಿಗೆ 8 ವಿಕೆಟ್ ಕಳೆದುಕೊಂಡು ಕನಿಷ್ಠ ಮೊತ್ತಕ್ಕೆ ಆಲೌಟ್ ಆಗುವತ್ತ ಸಾಗಿತ್ತು.
ಈ ಹಂತದಲ್ಲಿ ಶ್ರೀಲಂಕಾದ ವೇಗದ ಬೌಲರ್ ಚಾಮಿಕ ಕರುಣರತ್ನೆ ತಂಡದ ಪರವಾಗಿ ಅದ್ಭುತ ಇನ್ನಿಂಗ್ಸ್ ಆಡಿದರು. ಪ್ರಮೋದ್ ಮದುಶನ್ ಅವರ ನೆರವಿನೊಂದಿಗೆ 9ನೇ ವಿಕೆಟ್‌ಗೆ ಕರುಣರತ್ನೆ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದರು. ಭರ್ಜರಿ 75 ರನ್‌ಗಳನ್ನು ಕಲೆ ಹಾಕುವ ಮೂಲಕ ತಂಡದ ಮೊತ್ತವನ್ನು ಏರಿಸಲು ಸಫಲರಾದರು. ಕಮ್ಮಿಂಗ್ಸ್ ಬೌಲಿಂಗ್ನಲ್ಲಿ ಕರುಣರತ್ನೆ ವಿಕೆಟ್ವೊಪ್ಪಿಸಿದರು. 43.1 ಓವರ್ಗಳಿಗೆ ಶ್ರೀಲಂಕಾ ತನ್ನೆಲ್ಲ ವಿಕೆಟ್ಗಳನ್ನು ಕಳೆದುಕೊಂಡು 160 ರನ್‌ಗಳಿಸಲು ಮಾತ್ರ ಸಾಧ್ಯವಾಯಿತು.
ಓದಿ:ಶ್ರೀಲಂಕಾ ಪ್ರವಾಸದ ಮೊದಲ ಟಿ-20 ಪಂದ್ಯದಲ್ಲಿ ಗೆದ್ದ ಭಾರತದ ವನಿತೆಯರು