ಹೈದರಾಬಾದ್:2024ರ ಚುಟುಕು ಕ್ರಿಕೆಟ್ನ ಜಾತ್ರೆಗೆ ಇನ್ನು ಕೆಲವೇ ತಿಂಗಳುಗಳು ಬಾಕಿ ಇದ್ದು ತಯಾರಿ ಜೋರಾಗಿಯೇ ನಡೆಯುತ್ತಿದೆ. ಡಿಸೆಂಬರ್ 19 ರಂದು ದುಬೈನ ಕೋಕಾ - ಕೋಲಾ ಅರೆನಾದಲ್ಲಿ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024 ಆಟಗಾರರ ಹರಾಜಿನಲ್ಲಿ 333 ಕ್ರಿಕೆಟಿಗರು ಇರಲಿದ್ದಾರೆ ಎಂದು ಬಿಸಿಸಿಐ ಮಾಹಿತಿ ನೀಡಿದೆ.
2024ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಹೆಚ್ಚಿನ ಮಹತ್ವ ಪಡೆಯುತ್ತಿದೆ. ಇದಕ್ಕೆ ಕಾರಣ ಐಪಿಎಲ್ ಮುಗಿದ ಬೆನ್ನಲ್ಲೇ ವೆಸ್ಟ್ ಇಂಡೀಸ್ ಮತ್ತು ಅಮೆರಿಕದಲ್ಲಿ ನಡೆಯಲಿರುವ ಟಿ20 ವಿಶ್ವಕಪ್. ಹೀಗಾಗಿ ಐಪಿಎಲ್ನಲ್ಲಿ ಮಿಂಚಿದ ಆಟಗಾರರಿಗೆ ವಿಶ್ವಕಪ್ನಲ್ಲಿ ಆಡಲು ರಾಷ್ಟ್ರೀಯ ತಂಡಗಳು ಕರೆ ನೀಡುವ ಸಾಧ್ಯತೆ ಇದೆ.
333 ಆಟಗಾರರ ಪೈಕಿ 214 ಆಟಗಾರರು ಭಾರತೀಯರು ಮತ್ತು 119 ವಿದೇಶಿ ಆಟಗಾರರು. ಇಬ್ಬರು ಟೆಸ್ಟ್ ಆಡದ (ಅಸೋಸಿಯೇಟ್) ರಾಷ್ಟ್ರಗಳ ಆಟಗಾರರು ಇದ್ದಾರೆ. ಇದರಲ್ಲಿ ಒಟ್ಟು 116 ಕ್ಯಾಪ್ಡ್ ಆಟಗಾರರು, 215 ಅನ್‌ಕ್ಯಾಪ್ಡ್ ಆಟಗಾರರು ಇಬ್ಬರು ಅಸೋಸಿಯೇಟ್ ರಾಷ್ಟ್ರಗಳ ಆಟಗಾರರು ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ನೋಂದಾಯಿತರ ಸಂಖ್ಯೆ:ಸುಮಾರು 1,166 ಆಟಗಾರರು ಐಪಿಎಲ್ ಮಿನಿ ಹರಾಜಿಗೆ ನೋಂದಾಯಿಸಿಕೊಂಡಿದ್ದರು. ಇದರಲ್ಲಿ 830 ಭಾರತೀಯರಿದ್ದು, 18 ಕ್ಯಾಪ್ಡ್ ಆಟಗಾರರು ಮತ್ತು 336 ವಿದೇಶಿ ಆಟಗಾರರಿದ್ದಾರೆ.