ಢಾಕಾ (ಬಾಂಗ್ಲಾದೇಶ): ವೇಗಿ ಉಮೇಶ್ ಯಾದವ್ ಮತ್ತು ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ತಲಾ ನಾಲ್ಕು ವಿಕೆಟ್‌ಗಳ ನೆರವಿನಿಂದ ಭಾರತವು ಎರಡನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ಬಾಂಗ್ಲಾದೇಶ ತಂಡವನ್ನು 227 ರನ್‌ಗಳಿಗೆ ಕಟ್ಟಿ ಹಾಕುವಲ್ಲಿ ಯಶಸ್ವಿಯಾಗಿದೆ. ತನ್ನ ಮೊದಲ ಇನ್ನಿಂಗ್ಸ್ ಆರಂಭಿಸಿರುವ ಟೀಂ ಇಂಡಿಯಾ ಮೊದಲ ದಿನದ ಅಂತ್ಯಕ್ಕೆ ವಿಕೆಟ್ನಷ್ಟವಿಲ್ಲದೇ 19 ರನ್ಗಳನ್ನು ಗಳಿಸಿದೆ.
ಢಾಕಾದ ಶೇರ್-ಎ-ಬಾಂಗ್ಲಾ ರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಇಂದಿನಿಂದ ಆರಂಭವಾಗಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾದೇಶ ಟಾಸ್ ಗೆದ್ದು ಮೊದಲ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. ಆದರೆ, ಬಾಂಗ್ಲಾದ ಆರಂಭವು ಉತ್ತಮವಾಗಿರಲಿಲ್ಲ. ಮೊಮಿನುಲ್ ಹಕ್ (84) ಹೊರತುಪಡಿಸಿದರೆ ಯಾವ ಆಟಗಾರರು ಬ್ಯಾಟ್ ಬೀಸಲು ಸಾಧ್ಯವಾಗಲಿಲ್ಲ. ಹೀಗಾಗಿ 73.5 ಓವರ್‌ಗಳಲ್ಲಿ ಬಾಂಗ್ಲಾ 227 ರನ್‌ಗಳಿಗೆ ಸರ್ವಪತನ ಕಂಡಿತು.
ಆರಂಭಿಕರಾದ ನಜ್ಮುಲ್ ಹೊಸೈನ್ ಶಾಂತೋ (24) ಮತ್ತು ಜಾಕಿರ್ ಹಸನ್ (15) ತಂಡದ ಮೊತ್ತ 39 ರನ್ ಆಗುವಷ್ಟರಲ್ಲಿ ವಿಕೆಟ್ ಒಪ್ಪಿಸಿದರು. ಮೂರನೇ ಕ್ರಮಾಂಕದಲ್ಲಿ ಮೊಮಿನುಲ್ ಹಕ್ 157 ಎಸೆತಗಳಲ್ಲಿ ಒಂದು ಸಿಕ್ಸರ್, 12 ಬೌಂಡರಿಗಳೊಂದಿಗೆ 84 ರನ್ ಬಾರಿಸಿದರು. 130 ರನ್‌ಗಳವರೆಗೆ ಕೇವಲ 4 ವಿಕೆಟ್ ಕಳೆದುಕೊಂಡಿದ್ದ ಬಾಂಗ್ಲಾ ತಂಡವು ನಂತರ ನಿಂರತರವಾಗಿ ವಿಕೆಟ್ಗಳನ್ನು ಕಳೆದುಕೊಳ್ಳುತ್ತಲೇ ಸಾಗಿತ್ತು.
ನಾಯಕ ಶಕೀಬ್ ಅಲ್ ಹಸನ್ (16), ಮುಶ್ಫಿಕರ್ ರಹೀಮ್ (26) ಮತ್ತು ಲಿಟ್ಟನ್ ದಾಸ್ 25 ರನ್ಗಳನ್ನು ಗಳಿಸಲಷ್ಟೇ ಸಾಧ್ಯವಾಯಿತು. ಹೀಗಾಗಿ ರವಿಚಂದ್ರನ್ ಅಶ್ವಿನ್ ಹಾಗೂ ವೇಗಿ ಉಮೇಶ್ ಯಾದವ್ ದಾಳಿಗೆ ಬಾಂಗ್ಲಾ ತತ್ತರಿಸಿ ಹೋಯಿತು. 15 ಓವರ್ಗಳನ್ನು ಎಸೆದ ವೇಗಿ ಉಮೇಶ್ ಯಾದವ್ 4 ಮೇಡನ್ ಓವರ್ಗಳೊಂದಿಗೆ ಕೇವಲ 25 ರನ್ ನೀಡಿ 4 ವಿಕೆಟ್ ಕಬಳಿಸಿದರು. ರವಿಚಂದ್ರನ್ ಅಶ್ವಿನ್ 71 ರನ್ ನೀಡಿ 4 ವಿಕೆಟ್ ಪಡೆದರು. 12 ವರ್ಷಗಳ ಬಳಿಕ ಟೆಸ್ಟ್ ಕ್ರಿಕೆಟ್‌ಗೆ ಮರಳಿದ ಜಯದೇವ್ ಉನಾದ್ಕತ್ 2 ವಿಕೆಟ್ ಕಬಳಿಸಿದರು.
ಇತ್ತ, ಮೊದಲ ಇನಿಂಗ್ಸ್ ಆರಂಭಿಸಿರುವ ಟೀಂ ಇಂಡಿಯಾ ದಿನದಾಟ ಅಂತ್ಯಕ್ಕೆ 8 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 19 ರನ್ ಗಳಿಸಿದೆ. ಆರಂಭಿಕರಾದ ಶುಭ್‌ಮನ್ ಗಿಲ್ 14 ರನ್ ಹಾಗೂ ಕೆಎಲ್ ರಾಹುಲ್ 3 ರನ್ ಗಳಿಸಿ ಎರಡನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ. ಭಾರತ ತಂಡ ಮೊದಲ ಇನ್ಸಿಂಗ್ಸ್ನಲ್ಲಿ 208 ರನ್‌ಗಳ ಹಿನ್ನಡೆಯಲ್ಲಿದೆ.