ಲೂದಿಯಾನ:21 ವರ್ಷದ ಯುವ ಬ್ಯಾಟರ್ ನೇಹಲ್ ವಡೇರಾ ಪಂಜಾಬ್ ಅಂಡರ್ -23 ಅಂತರ್ ಜಿಲ್ಲಾ ಕ್ರಿಕೆಟ್ ಚಾಂಪಿಯನ್ಶಿಪ್ನಲ್ಲಿ 578 ರನ್ಗಳ ಬೃಹತ್ ಮೊತ್ತ ಸಿಡಿಸುವ ಮೂಲಕ ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಭಾರತ ಅಂಡರ್ 19 ತಂಡದ ಮಾಜಿ ಬ್ಯಾಟರ್ ಆಗಿರುವ ಎಡಗೈ ಸ್ಟೈಲಿಷ್ ಬ್ಯಾಟರ್ ನೇಹಲ್ ಲೂದಿಯಾನ ತಂಡವನ್ನು ಪ್ರತಿನಿಧಿಸುತ್ತಿದ್ದು, ಸೆಮಿಫೈನಲ್ನ 2ನೇ ದಿನ ಔಟಾಗುವ ಮುನ್ನ 414 ಎಸೆತಗಳಲ್ಲಿ 578 ರನ್ಗಳಿಸಿದರು.
ಬತಿಂಡಾ ತಂಡದ ವಿರುದ್ಧ ನಡೆಯುತ್ತಿರುವ ಈ ಪಂದ್ಯದಲ್ಲಿ 21 ವರ್ಷದ ನೇಹಲ್ 42 ಬೌಂಡರಿ ಮತ್ತು 37 ಸಿಕ್ಸರ್ ಸಿಡಿಸಿದ್ದಾರೆ. ಅವರು ಬೌಂಡರಿ ಮತ್ತು ಸಿಕ್ಸರ್ಗಳ ಮೂಲಕವೇ 390 ರನ್ ದಾಖಲಿಸಿದರು. ಇವರ ಅಬ್ಬರದ ಇನ್ನಿಂಗ್ಸ್ನಿಂದ ಲೂದಿಯಾನ 6 ವಿಕೆಟ್ ಕಳೆದುಕೊಂಡು 888 ರನ್ಗಳಿಸಿ ಡಿಕ್ಲೇರ್ ಘೋಷಿಸಿದೆ.
ಇದು ಪ್ರಥಮ ದರ್ಜೆ ಕ್ರಿಕೆಟ್ಗೆ ಸೇರುವುದಿಲ್ಲವಾದ್ದರಿಂದ ನೇಹಲ್ ಅದ್ಭುತ ಪ್ರದರ್ಶನ ವಿಶ್ವದಾಖಲೆಗೆ ಅರ್ಹವಾಗಿಲ್ಲ. ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ವೆಸ್ಟ್ ಇಂಡೀಸ್ನ ಬ್ರಿಯಾನ್ ಲಾರಾ ಅಜೇಯ 501 ರನ್ಗಳಿಸಿರುವುದು ವಿಶ್ವದಾಖಲೆಯಾಗಿದೆ. ಅವರು ಕೌಂಟಿ ಚಾಂಪಿಯನ್ಶಿಪ್ನಲ್ಲಿ ವಾರ್ವಿಕ್ಶೈರ್ ತಂಡದ ಪರ 1994ರಲ್ಲಿ ಈ ದಾಖಲೆ ಬರೆದಿದ್ದರು. ಲಾರ ಒಟ್ಟು 62 ಫೋರ್ಸ್ ಮತ್ತು 10 ಸಿಕ್ಸರ್ಗಳನ್ನು ಸಿಡಿಸಿದ್ದರು.