ನವದೆಹಲಿ: ಎರಡು ಬಾರಿ ಏಕದಿನ ಕ್ರಿಕೆಟ್ ವಿಶ್ವಕಪ್ ಗೆದ್ದಿರುವ ಟೀಂ ಇಂಡಿಯಾ ಇದೀಗ 3ನೇ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿದೆ. ಇದೇ ಮೊದಲ ಬಾರಿಗೆ ಸಂಪೂರ್ಣವಾಗಿ ಭಾರತದಲ್ಲೇ ವಿಶ್ವಕಪ್ ಆಯೋಜನೆ ಆಗುತ್ತಿದ್ದು, 10 ವರ್ಷಗಳ ಐಸಿಸಿ ಟ್ರೋಫಿಯ ಬರ ನೀಗಿಸಲು ರೋಹಿತ್ ಬಳಗ ಸಜ್ಜಾಗಿದೆ.
ವಿಶ್ವಕಪ್ಗೂ ಮುನ್ನ ಏಕದಿನ ಮಾದರಿಯ ಏಷ್ಯಾಕಪ್ ಮತ್ತು ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿ ಗೆದ್ದ ಭಾರತ ವಿಶ್ವಾಸ ಹೆಚ್ಚಿಸಿಕೊಂಡಿದೆ. ಇದರೊಂದಿಗೆ ಐಸಿಸಿ ಏಕದಿನ ಶ್ರೇಯಾಂಕದಲ್ಲಿಯೂ ನಂ.1 ತಂಡವಾಗಿ ಹೊರಹೊಮ್ಮಿದೆ. ಇದು ತಂಡದ ಆಟಗಾರರಿಗೆ ಮತ್ತಷ್ಟು ಬೂಸ್ಟ್ ನೀಡಿದೆ.
2011ರಲ್ಲಿ ಭಾರತ, ಶ್ರೀಲಂಕಾ ಮತ್ತು ಬಾಂಗ್ಲಾದೇಶ ಜಂಟಿಯಾಗಿ ವಿಶ್ವಕಪ್ ಟೂರ್ನಿ ಆಯೋಜಿಸಿತ್ತು. ಭಾರತ ಚಾಂಪಿಯನ್ ಆಗಿತ್ತು. ಈ ಬಾರಿಯೂ ಭಾರತವನ್ನು ವಿಶ್ವಕಪ್ ಗೆಲ್ಲುವ ಪ್ರಬಲ ಸ್ಪರ್ಧಿ ಎಂದು ಪರಿಗಣಿಸಲಾಗಿದೆ. 1975ರಿಂದ ಒಟ್ಟು 12 ವಿಶ್ವಕಪ್ ಟೂರ್ನಿಗಳನ್ನು ಆಯೋಜಿಸಲಾಗಿದ್ದು, ಟೀಂ ಇಂಡಿಯಾ 1983 ಮತ್ತು 2011ರಲ್ಲಿ ಎರಡು ಬಾರಿ ವಿಶ್ವ ಚಾಂಪಿಯನ್ ಆಗಿದೆ. ಆಸ್ಟ್ರೇಲಿಯಾ ಅತಿ ಹೆಚ್ಚು 5 ಬಾರಿ ಕಪ್ ಎತ್ತಿ ಹಿಡಿದಿದೆ. 12 ವಿಶ್ವಕಪ್ ಕೂಟದಲ್ಲಿ ಭಾರತ 2003ರಲ್ಲಿ ಫೈನಲ್‌ನಲ್ಲಿ ಸೋತರೆ, 2015 ಮತ್ತು 19ರಲ್ಲಿ ಸೆಮಿಫೈನಲ್ ತಲುಪಿ ಸೋಲು ಕಂಡಿದೆ. 1975ರಿಂದ 2019ರವರೆಗಿನ ವಿಶ್ವಕಪ್‌ನಲ್ಲಿ ಟೀಂ ಇಂಡಿಯಾದ ಪ್ರದರ್ಶನ ಹೇಗಿತ್ತು ನೋಡೋಣ.
1975 ವಿಶ್ವಕಪ್ - 5ನೇ ಸ್ಥಾನ: ವಿಶ್ವಕಪ್‌ನ ಮೊದಲ ಆವೃತ್ತಿಯನ್ನು ಇಂಗ್ಲೆಂಡ್‌ನಲ್ಲಿ ಆಯೋಜಿಸಲಾಗಿತ್ತು. ಎಸ್.ವೆಂಕಟರಾಘವನ್ ಭಾರತ ತಂಡದ ಮೊದಲ ನಾಯಕರಾಗಿದ್ದರು. ತಂಡವು ಪೂರ್ವ ಆಫ್ರಿಕಾ ವಿರುದ್ಧದ 3 ಪಂದ್ಯಗಳ ಪೈಕಿ 1ರಲ್ಲಿ ಮಾತ್ರ ಜಯಿಸಿತ್ತು. ಅಂತಿಮವಾಗಿ ಭಾರತ 5ನೇ ಸ್ಥಾನ ಪಡೆದುಕೊಂಡಿತ್ತು. ಆ ಸಂದರ್ಭದ ಭಾರತವನ್ನು ಕ್ರಿಕೆಟ್ ಶಿಶು ಎಂದು ಕರೆಯಲಾಗುತ್ತಿತ್ತು. ಬಲಿಷ್ಠ ವೆಸ್ಟ್ ಇಂಡೀಸ್ ಪ್ರಶಸ್ತಿ ಗೆದ್ದುಕೊಂಡಿತ್ತು.
1975ರ ವಿಶ್ವಕಪ್ ತಂಡ: ಶ್ರೀನಿವಾಸರಾಘವನ್ ವೆಂಕಟರಾಘವನ್ (ನಾಯಕ), ಸೈಯದ್ ಅಬಿದ್ ಅಲಿ, ಮೊಹಿಂದರ್ ಅಮರನಾಥ್, ಬಿಷನ್ ಸಿಂಗ್ ಬೇಡಿ (ಉಪನಾಯಕ), ಫಾರೂಕ್ ಇಂಜಿನಿಯರ್ (ವಿಕೆಟ್ ಕೀಪರ್), ಅಂಶುಮಾನ್ ಗಾಯಕ್ವಾಡ್, ಸುನಿಲ್ ಗವಾಸ್ಕರ್, ಕರ್ಸನ್ ಘಾವ್ರಿ, ಮದನ್ ಲಾಲ್, ಬ್ರಿಜೇಶ್ ಪಟೇಲ್, ಏಕನಾಥ್ ಸೋಲ್ಕರ್, ಏಕನಾಥ್ ಸೋಲ್ಕರ್ ವಿಶ್ವನಾಥ್, ಸೈಯದ್ ಕಿರ್ಮಾನಿ (ವಿಕೆಟ್ ಕೀಪರ್), ಪಾರ್ಥಸಾರಥಿ ಶರ್ಮಾ.
1979ರ ವಿಶ್ವಕಪ್ - 7ನೇ ಸ್ಥಾನ:1979 ಕ್ರಿಕೆಟ್ ವಿಶ್ವಕಪ್‌ನ ಆತಿಥ್ಯ ಮತ್ತೊಮ್ಮೆ ಇಂಗ್ಲೆಂಡ್‌ನ ಕೈಯಲ್ಲಿತ್ತು. ಕಳಪೆ ಪ್ರದರ್ಶನದ ಹೊರತಾಗಿಯೂ ಟೀಂ ಇಂಡಿಯಾವನ್ನು ಎಸ್.ವೆಂಕಟರಾಘವನ್ ಅವರಿಗೆ ಹಸ್ತಾಂತರಿಸಲಾಗಿತ್ತು. ವಿಶ್ವಕಪ್‌ನಲ್ಲಿ ಭಾರತ ತಂಡದ ಪ್ರದರ್ಶನವು 1975ಕ್ಕಿಂತ ಕಳಪೆಯಾಗಿತ್ತು. ತನ್ನೆಲ್ಲಾ ಮೂರು ಪಂದ್ಯಗಳಲ್ಲೂ ಸೋತ ನಂತರ ಪಂದ್ಯಾವಳಿಯಿಂದ ಹೊರ ಬಿದ್ದಿತ್ತು. ಭಾರತವನ್ನು ವೆಸ್ಟ್ ಇಂಡೀಸ್ 9 ವಿಕೆಟ್‌ಗಳಿಂದ ಮತ್ತು ನ್ಯೂಜಿಲೆಂಡ್ 8 ವಿಕೆಟ್‌ಗಳಿಂದ ಮಣಿಸಿತ್ತು. ಶ್ರೀಲಂಕಾದಂತಹ ದುರ್ಬಲ ತಂಡದ ವಿರುದ್ಧವೂ ಭಾರತ ಪರಾಜಯ ಅನುಭವಿಸಿತ್ತು. ಅಂತಿಮವಾಗಿ 7ನೇ ಸ್ಥಾನ ಗಳಿಸಿತು. ವೆಸ್ಟ್ ಇಂಡೀಸ್ ಸತತ ಎರಡನೇ ಬಾರಿಗೆ ವಿಶ್ವ ಚಾಂಪಿಯನ್ ಆಯಿತು.
1979ರ ವಿಶ್ವಕಪ್ ತಂಡ: ಶ್ರೀನಿವಾಸರಾಘವನ್ ವೆಂಕಟರಾಘವನ್ (ನಾಯಕ), ಮೊಹಿಂದರ್ ಅಮರನಾಥ್, ಬಿಷನ್ ಸಿಂಗ್ ಬೇಡಿ, ಅಂಶುಮಾನ್ ಗಾಯಕ್ವಾಡ್, ಸುನಿಲ್ ಗವಾಸ್ಕರ್ (ಉಪನಾಯಕ), ಕರ್ಸನ್ ಘವ್ರಿ, ಕಪಿಲ್ ದೇವ್, ಸುರಿಂದರ್ ಖತ್ರಾ (ವಿಕೆಟ್ ಕೀಪರ್), ಬ್ರಿಜೇಶ್ ಪಟೇಲ್, ದಿಲೀಪ್ ವೆಂಗ್‌ಸರ್ಕರ್, ಗುಂಡಪ್ಪ ವಿಶ್ವನಾಥ್, ಭರತ ರೆಡ್ಡಿ , ಯಜುರ್ವಿಂದ್ರ ಸಿಂಗ್, ಯಶಪಾಲ್ ಶರ್ಮಾ.
1983ರ ವಿಶ್ವಕಪ್ - ಭಾರತ ಚಾಂಪಿಯನ್!:1983ರಲ್ಲಿ ಇಂಗ್ಲೆಂಡ್‌ನಲ್ಲಿ ಸತತ ಮೂರನೇ ಬಾರಿಗೆ ಕ್ರಿಕೆಟ್ ವಿಶ್ವಕಪ್ ಆಯೋಜಿಸಲಾಯಿತು. ಟೂರ್ನಿ ಆರಂಭಕ್ಕೂ ಮುನ್ನ ಭಾರತ ತಂಡವನ್ನು ದುರ್ಬಲ ತಂಡ ಎಂದೇ ಪರಿಗಣಿಸಲಾಗಿತ್ತು. ಅಭ್ಯಾಸ ಪಂದ್ಯದಲ್ಲಿ ಭಾರತ ಆಂಗ್ಲ ಕೌಂಟಿ ತಂಡದ ವಿರುದ್ಧವೂ ಸೋತಿತ್ತು. ಆದರೆ ಮುಖ್ಯ ಸುತ್ತಿನ ಪಂದ್ಯಗಳು ಆರಂಭವಾಗುತ್ತಿದ್ದಂತೆಯೇ ತಂಡದ ಆಟಗಾರರು ಫಾರ್ಮ್ಗೆ ಬಂದರು. ಲೀಗ್ ಸುತ್ತಿನಲ್ಲಿ ವೆಸ್ಟ್ ಇಂಡೀಸ್‌ನಂತಹ ಬಲಿಷ್ಠ ತಂಡವನ್ನೇ ಸೋಲಿಸುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿತು. ಇದಾದ ನಂತರ, ಕಪಿಲ್ ದೇವ್ ನಾಯಕತ್ವದ ಟೀಂ ಇಂಡಿಯಾ, ಫೈನಲ್‌ನಲ್ಲಿ ವೆಸ್ಟ್ ಇಂಡೀಸ್ ಅನ್ನು 43 ರನ್‌ಗಳಿಂದ ಸೋಲಿಸುವ ಮೂಲಕ ಮೊದಲ ಬಾರಿಗೆ ವಿಶ್ವ ಚಾಂಪಿಯನ್ ಆಯಿತು.
1983 ವಿಶ್ವಕಪ್ ತಂಡ: ಕಪಿಲ್ ದೇವ್ (ನಾಯಕ), ಮೊಹಿಂದರ್ ಅಮರನಾಥ್ (ಉಪನಾಯಕ), ಕೀರ್ತಿ ಆಜಾದ್, ರೋಜರ್ ಬಿನ್ನಿ, ಸುನಿಲ್ ಗವಾಸ್ಕರ್, ಸೈಯದ್ ಕಿರ್ಮಾನಿ (ವಿಕೆಟ್ ಕೀಪರ್), ಮದನ್ ಲಾಲ್, ಸಂದೀಪ್ ಪಾಟೀಲ್, ಬಲ್ವಿಂದರ್ ಸಂಧು, ಯಶಪಾಲ್ ಶರ್ಮಾ, ರವಿಶಾಸ್ತ್ರಿ, ಕೃಷ್ಣಮಾಚಾರಿ ಶ್ರೀಕ್ಕಂತ್ , ಸುನಿಲ್ ವಾಲ್ಸನ್, ದಿಲೀಪ್ ವೆಂಗ್‌ಸರ್ಕರ್
1987ರ ವಿಶ್ವಕಪ್ - ಸೆಮಿಫೈನಲ್: ಭಾರತ ಮತ್ತು ಪಾಕಿಸ್ತಾನ ಜಂಟಿಯಾಗಿ 1987ರ ವಿಶ್ವಕಪ್ ಆಯೋಜಿಸಿದ್ದವು. ಮೊದಲ ಬಾರಿಗೆ, ವಿಶ್ವಕಪ್ ಅನ್ನು 60 ಬದಲಿಗೆ 50 ಓವರ್‌ಗಳಲ್ಲಿ ಆಡಲಾಯಿತು. ಕಪಿಲ್ ದೇವ್ ನಾಯಕತ್ವದ ಭಾರತ ಕ್ರಿಕೆಟ್ ತಂಡ ಅದ್ಭುತ ಪ್ರದರ್ಶನ ನೀಡಿ ಸೆಮಿಫೈನಲ್ ತಲುಪಿತು. ಆದರೆ, ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಸೋಲನುಭವಿಸಬೇಕಾಯಿತು. ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಭಾರತದ ವೇಗಿ ಚೇತನ್ ಶರ್ಮಾ ವಿಶ್ವಕಪ್‌ನ ಮೊದಲ ಹ್ಯಾಟ್ರಿಕ್ ಸಾಧನೆ ಮಾಡಿದರು. ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಸೋಲಿಸುವ ಮೂಲಕ ಆಸ್ಟ್ರೇಲಿಯಾ ಮೊದಲ ಬಾರಿಗೆ ವಿಶ್ವ ಚಾಂಪಿಯನ್ ಆಯಿತು.
1987 ವಿಶ್ವಕಪ್ ತಂಡ: ಕಪಿಲ್ ದೇವ್ (ನಾಯಕ), ಕೃಷ್ಣಮಾಚಾರಿ ಶ್ರೀಕಾಂತ್, ದಿಲೀಪ್ ವೆಂಗ್‌ಸರ್ಕರ್ (ಉಪನಾಯಕ), ಮೊಹಮ್ಮದ್ ಅಜರುದ್ದೀನ್, ರೋಜರ್ ಬಿನ್ನಿ, ಸುನಿಲ್ ಗವಾಸ್ಕರ್, ಮಣಿಂದರ್ ಸಿಂಗ್, ಕಿರಣ್ ಮೋರೆ (ವಿಕೆಟ್ ಕೀಪರ್), ಚಂದ್ರಕಾಂತ್ ಪಂಡಿತ್, ಮನೋಜ್ ಪ್ರಭಾಕರ್, ಚೇತನ್ ಶರ್ಮಾ, ರವಿಶಾಸ್ತ್ರಿ , ನವಜೋತ್ ಸಿಂಗ್ ಸಿಧು, ಲಕ್ಷ್ಮಣ್ ಶಿವರಾಮಕೃಷ್ಣನ್.
1992ರ ವಿಶ್ವಕಪ್ - 7ನೇ ಸ್ಥಾನ: ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ಮೊದಲ ಬಾರಿಗೆ 1992 ರ ವಿಶ್ವಕಪ್ ಅನ್ನು ಜಂಟಿಯಾಗಿ ಆಯೋಜಿಸಿದ್ದವು. ಮೊಹಮ್ಮದ್ ಅಜರುದ್ದೀನ್ ನಾಯಕತ್ವದ ಭಾರತ ಕ್ರಿಕೆಟ್ ತಂಡ ಮಿಶ್ರ ಪ್ರದರ್ಶನ ನೀಡಿತ್ತು. ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧ ಟೀಂ ಇಂಡಿಯಾ ಅಲ್ಪ ಅಂತರದಲ್ಲಿ ಸೋಲನುಭವಿಸಿತು. ಕ್ರಿಕೆಟ್ ದೇವರೆಂದೇ ಕರೆಯಲ್ಪಡುವ ಸಚಿನ್ ತೆಂಡೂಲ್ಕರ್ ಮೊದಲ ಬಾರಿಗೆ ವಿಶ್ವಕಪ್‌ನಲ್ಲಿ ಆಡಿದ್ದರು. ಅಂತಿಮವಾಗಿ ಭಾರತ 7ನೇ ಸ್ಥಾನ ಪಡೆಯಿತು. ಇಮ್ರಾನ್ ಖಾನ್ ನಾಯಕತ್ವದಲ್ಲಿ ಪಾಕಿಸ್ತಾನವು ಇಂಗ್ಲೆಂಡ್ ಅನ್ನು ಫೈನಲ್‌ನಲ್ಲಿ ಸೋಲಿಸುವ ಮೂಲಕ ವಿಶ್ವ ಚಾಂಪಿಯನ್ ಆಯಿತು.
1992 ವಿಶ್ವಕಪ್ ತಂಡ: ಮೊಹಮ್ಮದ್ ಅಜರುದ್ದೀನ್ (ನಾಯಕ), ಸುಬ್ರೋತೊ ಬ್ಯಾನರ್ಜಿ, ಸಚಿನ್ ತೆಂಡೂಲ್ಕರ್, ಅಜಯ್ ಜಡೇಜಾ, ವಿನೋದ್ ಕಾಂಬ್ಳಿ, ಕಪಿಲ್ ದೇವ್, ರವಿಶಾಸ್ತ್ರಿ (ಉಪನಾಯಕ), ಸಂಜಯ್ ಮಂಜ್ರೇಕರ್, ಕಿರಣ್ ಮೋರೆ (ವಿಕೆಟ್ ಕೀಪರ್), ಮನೋಜ್ ಪ್ರಭಾಕರ್, ವೆಂಕಟಾಚಾರಪತಿ ರಾಜು, ಕೃಷ್ಣಮ್ಮ , ಜಾವಗಲ್.ಶ್ರೀನಾಥ್, ಪ್ರವೀಣ್ ಆಮ್ರೆ
1996ರ ವಿಶ್ವಕಪ್ - ಸೆಮಿಫೈನಲ್: 1996ರ ವಿಶ್ವಕಪ್‌ನ ಆತಿಥ್ಯ ಭಾರತದ ಕೈಯಲ್ಲಿತ್ತು. ಮೊಹಮ್ಮದ್ ಅಜರುದ್ದೀನ್ ನಾಯಕತ್ವದ ಟೀಂ ಇಂಡಿಯಾ ಗೆಲುವಿನ ಪ್ರಬಲ ಸ್ಪರ್ಧಿ ಎಂದು ಪರಿಗಣಿಸಲಾಗಿತ್ತು. ಭಾರತವು ಕೀನ್ಯಾ ಮತ್ತು ವೆಸ್ಟ್ ಇಂಡೀಸ್ ತಂಡಗಳನ್ನು ಸೋಲಿಸುವ ಮೂಲಕ ಶುಭಾರಂಭ ಮಾಡಿತು. ಭಾರತ ಕ್ವಾರ್ಟರ್ ಫೈನಲ್‌ನಲ್ಲಿ ಪಾಕಿಸ್ತಾನವನ್ನು ಸೋಲಿಸಿತು, ಆದರೆ ಸೆಮಿಫೈನಲ್‌ನಲ್ಲಿ ಶ್ರೀಲಂಕಾ ವಿರುದ್ಧ ಪರಾಜಯ ಅನುಭವಿಸಿತು. ಫೈನಲ್‌ನಲ್ಲಿ ಕಾಂಗರೂ ತಂಡವನ್ನು ಸೋಲಿಸುವ ಮೂಲಕ ಶ್ರೀಲಂಕಾ ತಂಡ ಚೊಚ್ಚಲ ಬಾರಿಗೆ ವಿಶ್ವಕಪ್ ವಶಪಡಿಸಿಕೊಂಡಿತು.