ಚೆನ್ನೈ (ತಮಿಳುನಾಡು):ವಿಶ್ವಕಪ್ನಲ್ಲಿ ಎರಡು ಬೃಹತ್ ಗೆಲುವು ದಾಖಲಿಸಿದ ನ್ಯೂಜಿಲೆಂಡ್ ತಂಡಕ್ಕೆ ಬಾಂಗ್ಲಾದೇಶ 246 ರನ್ಗಳ ಸಾಧಾರಣ ಗುರಿ ನೀಡಿತು. ಕಿವೀಸ್ನ ಲಾಕಿ ಫರ್ಗುಸನ್, ಮ್ಯಾಟ್ ಹೆನ್ರಿ ಮತ್ತು ಬೋಲ್ಟ್ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದರು. ಇದರಿಂದಾಗಿ ಶಕೀಬ್ ಅಲ್ ಹಸನ್ ಪಡೆ ನಿಗದಿತ ಓವರ್‌ಗಳಂತ್ಯಕ್ಕೆ 9 ವಿಕೆಟ್ ಕಳೆದುಕೊಂಡು 245 ರನ್ ಕಲೆಹಾಕಿತು.
ರಾತ್ರಿ ಬೀಳುವ ಮಂಜಿನ ಲಾಭ ಪಡೆಯುವ ಉದ್ದೇಶದಿಂದ ಟಾಸ್ ಗೆದ್ದ ಕಿವೀಸ್ ನಾಯಕ ಕೇನ್ ವಿಲಿಯಮ್ಸನ್ ಮೊದಲು ಕ್ಷೇತ್ರ ರಕ್ಷಣೆ ಆಯ್ಕೆ ಮಾಡಿಕೊಂಡರು. ಅದರಂತೆ ಬೌಲಿಂಗ್ ಮತ್ತು ಫೀಲ್ಡಿಂಗ್ನಲ್ಲಿ ಉತ್ತಮ ಪ್ರದರ್ಶನ ನೀಡಿ ಬಾಂಗ್ಲಾವನ್ನು ಸಾಧಾರಣ ಮೊತ್ತಕ್ಕೆ ಕಟ್ಟಿ ಹಾಕಿದರು.
ಆರಂಭಿಕ ಜೊತೆಯಾಟದ ಕೊರತೆ: ಏಕದಿನ ಪಂದ್ಯದಲ್ಲಿ ಮೊದಲ ವಿಕೆಟ್ ಜೊತೆಯಾಟ ಪ್ರಮುಖವಾಗುತ್ತದೆ. ನ್ಯೂಜಿಲೆಂಡ್ನ ಅನುಭವಿ ಎಡಗೈ ವೇಗಿ ಟ್ರೆಂಟ್ ಬೌಲ್ಟ್ ಮೊದಲ ಬಾಲ್ನಲ್ಲೇ ಲಿಟ್ಟನ್ ದಾಸ್ ವಿಕೆಟ್ ಪಡೆದರು. ಇದರಿಂದ ಬಾಂಗ್ಲಾಕ್ಕೆ ಒತ್ತಡ ಹೆಚ್ಚಾಯಿತು. ಕಿವೀಸ್ ದಾಳಿಯ ವಿರುದ್ಧ ರಕ್ಷಣಾತ್ಮಕ ಆಟ ಮುಂದುವರೆಸಿದ ಬಾಂಗ್ಲಾ ತಂಡಕ್ಕೆ ದೊಡ್ಡ ಜೊತೆಯಾಟ ಮೂಡಲೇ ಇಲ್ಲ. ತಂಝಿದ್ ಹಸನ್ (16), ಮೆಹಿದಿ ಹಸನ್ ಮಿರಾಜ್ (30) ಮತ್ತು ನಜ್ಮುಲ್ ಹೊಸೈನ್ ಶಾಂಟೊ (7) ಸ್ಕೋರ್ ಮಾಡುವಲ್ಲಿ ವಿಫಲರಾದರು.
ಅನುಭವಿಗಳ ಆಸರೆ: 13ನೇ ಓವರ್ನಲ್ಲಿ 4 ವಿಕೆಟ್ ಕಳೆದುಕೊಂಡಿದ್ದ ಬಾಂಗ್ಲಾಕ್ಕೆ ಅನುಭವಿ ಮಧ್ಯಮ ಕ್ರಮಾಂಕದ ಜೋಡಿಯಾದ ನಾಯಕ ಶಕೀಬ್ ಅಲ್ ಹಸನ್ ಮತ್ತು ಮುಶ್ಫಿಕರ್ ರಹೀಮ್ ಬಲವಾಗಿ ನಿಂತರು. ಇವರ ಜೊತೆಯಾಟ ತಂಡಕ್ಕೆ ಚೇತರಿಕೆ ನೀಡಿತು. 5ನೇ ವಿಕೆಟ್ಗೆ 96 ರನ್ ಜೊತೆಯಾಟ ಆಡಿದರು. ಇದರಿಂದ ತಂಡ ಚೇತರಿಸಿಕೊಂಡಿದ್ದಲ್ಲದೇ 150ರ ಗಡಿ ದಾಟಿತು. ಅರ್ಧಶತಕದತ್ತ ದಾಪುಗಾಲು ಹಾಕುತ್ತಿದ್ದ ಶಕೀಬ್ 40 ರನ್ಗೆ ಲಾಕಿ ಫರ್ಗುಸನ್ಗೆ ವಿಕೆಟ್ ಕೊಟ್ಟರು. ಅವರ ಬೆನ್ನಲ್ಲೇ ಅರ್ಧಶತಕ ಗಳಿಸಿದ ಮುಶ್ಫಿಕರ್ ರಹೀಮ್ (66) ಇನ್ನಿಂಗ್ಸ್ ಸಹ ಅಂತ್ಯವಾಯಿತು.
ಮಹಮ್ಮದುಲ್ಲಾ ಏಕಾಂಗಿ ಹೋರಾಟ:ಒಂದೆಡೆ ಬಾಲಂಗೋಚಿಗಳಾದ ತೌಹಿದ್ ಹೃದಯೋಯ್(13), ತಸ್ಕಿನ್ ಅಹ್ಮದ್ (17) ಮತ್ತು ಮುಸ್ತಫಿಜುರ್ ರೆಹಮಾನ್ (4) ವಿಫಲರಾದರೆ, ಮಹಮ್ಮದುಲ್ಲಾ ಏಕಾಂಗಿಯಾಗಿ ಹೋರಾಡಿದರು. ಅವರ ಹೋರಾಟದ ಫಲವಾಗಿ ಬಾಂಗ್ಲಾದೇಶ 250ನ್ನು ಸಮೀಪಿಸಿತು. ಇನ್ನಿಂಗ್ಸ್ನಲ್ಲಿ ಮಹಮ್ಮದುಲ್ಲಾ 49 ಬಾಲ್ ಎದುರಿಸಿ 2 ಬೌಂಡರಿ ಮತ್ತು ಸಿಕ್ಸ್ನಿಂದ 41 ರನ್ ಗಳಿಸಿ ಅಜೇಯರಾಗುಳಿದರು. ಇದರಿಂದ ಬಾಂಗ್ಲಾ 50 ಓವರ್ಗೆ 9 ವಿಕೆಟ್ ನಷ್ಟಕ್ಕೆ 245 ರನ್ ಗಳಿಸಿತು.
ಕಿವೀಸ್ ಪರ ಲಾಕಿ ಫರ್ಗುಸನ್ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದರು. ಬಾಂಗ್ಲಾದ 3 ವಿಕೆಟ್ ಕಿತ್ತ ಫರ್ಗುಸನ್ 10 ಓವರ್ 49 ರನ್ ಕೊಟ್ಟು 4.90ರ ಎಕಾನಮಿ ಸಾಧಿಸಿದರು. ಫರ್ಗುಸನ್ಗೆ ಟ್ರೆಂಟ್ ಬೌಲ್ಟ್ ಮತ್ತು ಮ್ಯಾಟ್ ಹೆನ್ರಿ ತಲಾ ಎರಡು ವಿಕೆಟ್ ಪಡೆದು ಸಾಥ್ ನೀಡಿದರು. ಗ್ಲೆನ್ ಫಿಲಿಪ್ಸ್, ಮಿಚೆಲ್ ಸ್ಯಾಂಟ್ನರ್ ತಲಾ ಒಂದು ವಿಕೆಟ್ ಪಡೆದರು.
ಇದನ್ನೂ ಓದಿ:ಶನಿವಾರ ಭಾರತ - ಪಾಕ್ ಹೈವೋಲ್ಟೇಜ್ ಪಂದ್ಯ.. ಹೇಗಿರುತ್ತೆ ಗೊತ್ತಾ ಅಭಿಮಾನಿಗಳ ಜೋಶ್