ಮುಂಬೈ (ಮಹಾರಾಷ್ಟ್ರ):2011ರಲ್ಲಿ ಭಾರತ ಕ್ರಿಕೆಟ್ ತಂಡ ಎರಡನೇ ಬಾರಿಗೆ ಏಕದಿನ ವಿಶ್ವಕಪ್ಗೆದ್ದು ಸಂಭ್ರಮಿಸಿತ್ತು. ಇದಕ್ಕೂ ಮುನ್ನ ಭಾರತ ವಿಶ್ವಕಪ್ ಗೆದ್ದಿದ್ದು 1983ರಲ್ಲಿ. ಆಗ ಕಪಿಲ್ ದೇವ್ ನಾಯಕತ್ವ ವಹಿಸಿದ್ದರು. 2011ರಲ್ಲಿ ವಿಶ್ವಕಪ್ ಭಾರತದಲ್ಲೇ ನಡೆದಿತ್ತು. ಮುಂಬೈನ ವಾಂಖೆಡೆಯಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಧೋನಿ ನಾಯಕತ್ವದ ಟೀಂ ಇಂಡಿಯಾ ಶ್ರೀಲಂಕಾ ತಂಡವನ್ನು ಬಗ್ಗು ಬಡಿದಿತ್ತು. ಈ ಗೆಲುವಿನ ಸ್ಮರಣಾರ್ಥ ವಿನ್ನಿಂಗ್ ಶಾಟ್ನ ಸಿಕ್ಸರ್ ಲ್ಯಾಂಡ್ ಆದ ಸ್ಥಳದಲ್ಲಿ ಸ್ಮಾರಕ ನಿರ್ಮಾಣಕ್ಕೆ ಮುಂಬೈ ಕ್ರಿಕೆಟ್ ಸಂಸ್ಥೆ (ಎಂಸಿಎ) ಚಿಂತಿಸಿದೆ.
ಮುಂಬೈ ಕ್ರಿಕೆಟ್ ಸಂಸ್ಥೆ (ಎಂಸಿಎ) ಅಧ್ಯಕ್ಷ ಅಮೋಲ್ ಕಾಳೆ ಮಾತನಾಡಿ, "ಭಾರತದ 2011ರ ಐಸಿಸಿ ಕ್ರಿಕೆಟ್ ವಿಶ್ವಕಪ್ ವಿಜಯದ ನೆನಪಿಗಾಗಿ ವಾಂಖೆಡೆ ಕ್ರೀಡಾಂಗಣದಲ್ಲಿ ಸಣ್ಣ ವಿಜಯ ಸ್ಮಾರಕ ನಿರ್ಮಿಸಲಾಗುವುದು. ಎಂಸಿಎ ಅಪೆಕ್ಸ್ ಕೌನ್ಸಿಲ್ ಈ ಕುರಿತು ನಿರ್ಧಾರ ತೆಗೆದುಕೊಂಡಿದೆ. ಎಂ.ಎಸ್.ಧೋನಿ ಹೊಡೆದ ಗೆಲುವಿನ ಸಿಕ್ಸರ್ ಬಿದ್ದ ಸ್ಟ್ಯಾಂಡ್‌ನ ಸ್ಥಳದಲ್ಲಿ ಸ್ಮಾರಕ ನಿರ್ಮಾಣವಾಗಲಿದೆ" ಎಂದು ತಿಳಿಸಿದರು.
"ಸ್ಮಾರಕದ ಉದ್ಘಾಟನೆಗೆ ಎಂ.ಎಸ್.ಧೋನಿ ಅವರನ್ನು ಎಂಸಿಎ ಸಂಪರ್ಕಿಸಲಿದೆ. ಏಪ್ರಿಲ್ 8 ರಂದು ಮುಂಬೈನಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ನ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಪಂದ್ಯಕ್ಕೆ ಧೋನಿ ಆಗಮಿಸಿದಾಗ ಅವರ ಕೈಯಲ್ಲೇ ಉದ್ಘಾಟನೆ ಮಾಡಿಸುವ ಬಗ್ಗೆ ಚರ್ಚೆ ನಡೆದಿದೆ" ಎಂದು ಹೇಳಿದ್ದಾರೆ.
"ದಿನಾಂಕವನ್ನು ಇನ್ನೂ ಅಂತಿಮಗೊಳಿಸಿಲ್ಲ. ಇದು ಧೋನಿ ಅವರ ಒಪ್ಪಿಗೆ ಮತ್ತು ಲಭ್ಯತೆಯ ಮೇಲೆ ಅವಲಂಬಿತವಾಗಿದೆ. ಸ್ಮಾರಕ ಉದ್ಘಾಟನೆಯ ಬಳಿಕ ಧೋನಿಯನ್ನು ಎಂಸಿಎ ಸನ್ಮಾನಿಸಲಿದೆ" ಎಂದು ಅವರು ಮಾಹಿತಿ ನೀಡಿದರು.
ರೋಚಕ ಪಂದ್ಯ:ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಭಾರತ ಆರು ವಿಕೆಟ್‌ಗಳಿಂದ ಶ್ರೀಲಂಕಾವನ್ನು ಸೋಲಿಸಿತ್ತು. ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ 50 ಓವರ್‌ಗಳಲ್ಲಿ 274/6 ಗಳಿಸಿತ್ತು. ಮಹೇಲ ಜಯವರ್ಧನೆ (103*) ಅವರ ಅಜೇಯ ಶತಕ ಮತ್ತು ನಾಯಕ ಕುಮಾರ ಸಂಗಕ್ಕಾರ (48), ನುವಾನ್ ಕುಲಶೇಖರ (32) ಮತ್ತು ತಿಸಾರ ಪೆರೆರಾ (22*) ಅವರ ಬ್ಯಾಟಿಂಗ್ ಬಲದಿಂದ ಲಂಕಾ ಸ್ಪರ್ಧಾತ್ಮಕ ಮೊತ್ತ ದಾಖಲಿಸಿತ್ತು. ಯುವರಾಜ್ ಸಿಂಗ್ ಮತ್ತು ಜಹೀರ್ ಖಾನ್ ತಲಾ ಎರಡು ಮತ್ತು ಹರ್ಭಜನ್ ಸಿಂಗ್ ಒಂದು ವಿಕೆಟ್ ಪಡೆದಿದ್ದರು.
275 ರನ್ ಗುರಿ ಬೆನ್ನತ್ತಿದ ಭಾರತ ತಂಡವು ಸೆಹ್ವಾಗ್ (0) ಮತ್ತು ತೆಂಡೂಲ್ಕರ್ (18) ಅವರನ್ನು ಬೇಗನೆ ಕಳೆದುಕೊಂಡಿತ್ತು. ಆದರೆ ಗೌತಮ್ ಗಂಭೀರ್ ಮತ್ತು ವಿರಾಟ್ ಕೊಹ್ಲಿ (35) 83 ರನ್‌ಗಳ ಜೊತೆಯಾಟ ನೀಡಿ ತಂಡಕ್ಕೆ ಆಸರೆಯಾಗಿದ್ದರು. ಗಂಭೀರ್ 122 ಎಸೆತಗಳಲ್ಲಿ 97 ರನ್ ಗಳಿಸಿದ್ದರು. ನಾಯಕ ಧೋನಿ ಅವರೊಂದಿಗೆ ನಾಲ್ಕನೇ ವಿಕೆಟ್‌ಗೆ 109 ರನ್ ಜೊತೆಯಾಟ ನೀಡಿದ್ದರು. ಧೋನಿ ಈ ಪಂದ್ಯದಲ್ಲಿ 79 ಎಸೆತಗಳಲ್ಲಿ ಅಜೇಯ 91* ರನ್ ಗಳಿಸಿದ್ದರು. ಧೋನಿ ಮತ್ತು ಯುವರಾಜ್ (21*) ಐದನೇ ವಿಕೆಟ್‌ಗೆ ಅಜೇಯ 54 ರನ್‌ಗಳನ್ನು ಪೇರಿಸಿದ್ದರು. ಇದು ಟೀಂ ಇಂಡಿಯಾವನ್ನು 28 ವರ್ಷಗಳ ನಂತರ ಮತ್ತೆ ವಿಶ್ವಕಪ್ ಪ್ರಶಸ್ತಿ ಎತ್ತಿ ಹಿಡಿಯು ಕಾರಣವಾಗಿತ್ತು.
ಇದನ್ನೂ ಓದಿ:ಐಪಿಎಲ್ನಲ್ಲಿ ಧೋನಿ 5000 ರನ್: ಮೊಬೈಲ್ ಟಾರ್ಚ್ ಬೆಳಗಿ ನಾಯಕನಿಗೆ ವಿಶೇಷ ಗೌರವ