ಬ್ಯಾಂಕಾಂಕ್: ಭಾರತೀಯ ಶಟ್ಲರ್ ಕಿಡಂಬಿ ಶ್ರೀಕಾಂತ್ ಬುಧವಾರ ನಡೆದ ಬಿಡಬ್ಲ್ಯೂಎಫ್ ವರ್ಲ್ಡ್ ಟೂರ್ ಫೈನಲ್ಸ್ನ ಗುಂಪು ಹಂತದ ಮೊದಲ ಪಂದ್ಯದಲ್ಲಿ ಡೆನ್ಮಾರ್ಕ್ನ ಆ್ಯಂಡರ್ಸ್ ಆ್ಯಂಟನ್ಸನ್ ವಿರುದ್ಧ ಸೋಲು ಕಂಡಿದ್ದಾರೆ.
ವರ್ಲ್ಡ್ ಟೂರ್ ಫೈನಲ್ಸ್ನ ಮೊದಲ ಪಂದ್ಯದಲ್ಲಿ 23 ವರ್ಷದ ಡ್ಯಾನೀಸ್ ಆಟಗಾರ ಆ್ಯಂಟನ್ಸನ್ ಭಾರತೀಯ ಆಟಗಾರನನ್ನು 15-21, 21-16, 21-1 ಅಂತರದಿಂದ ಮಣಿಸಿ ಶುಭಾರಂಭ ಮಾಡಿದ್ದಾರೆ. ಈ ರೋಚಕ ಕದನ 1 ಗಂಟೆ 17 ನಿಮಿಷ ನಡೆದಿದ್ದು, ಶ್ರೀಕಾಂತ್ ಯುವ ಆಟಗಾರನ ಹೋರಾಟದ ಮುಂದೆ ಮಂಕಾದರು.
ಆ್ಯಂಡರ್ಸ್ ಆಂಟನ್ಸನ್ ವಿರುದ್ಧ ಸೋಲು ಕಂಡ ಕಿಡಂಬಿ ಶ್ರೀಕಾಂತ್ ಮೊದಲ ಗೇಮ್ನಲ್ಲಿ ಎದುರಾಳಿಗೆ ಅವಕಾಶ ಕೊಡದೆ ಕೇವಲ 22 ನಿಮಿಷಗಳಲ್ಲಿ 21-15ರಲ್ಲಿ ಗೆದ್ದುಕೊಂಡರು. ಆದರೆ 2ನೇ ಗೇಮ್ನಲ್ಲಿ ಆ್ಯಂಟನ್ಸನ್ ತಮ್ಮ ತಪ್ಪುಗಳನ್ನು ತಿದ್ದುಕೊಂಡು 21-16ರಲ್ಲಿ ಗೆದ್ದರು. ನಿರ್ಣಾಯಕವಾಗಿದ್ದ ಮೂರನೇ ಗೇಮ್ನಲ್ಲಿ ಇಬ್ಬರ ನಡುವೆ ರೋಚಕ ಹೋರಾಟ ಕಂಡುಬಂದಿತು. ಒಂದು ಹಂತದಲ್ಲಿ 17-17ರಲ್ಲಿ ಸಮಬಲ ಸಾಧಿಸಿದ್ದರು. ಆದರೆ ಆ್ಯಂಟನ್ಸನ್ ತ್ವರಿತ ಆಟ ಪ್ರದರ್ಶನ ತೋರಿ 21-18ರಲ್ಲಿ ಗೆದ್ದುಕೊಂಡರು.
ಇದಕ್ಕೂ ಮುನ್ನ ನಡೆದ ಪಂದ್ಯದಲ್ಲಿ ವಿಶ್ವ ಚಾಂಪಿಯನ್ ಪಿ.ವಿ.ಸಿಂಧು ಕೂಡ ಮೊದಲ ಗುಂಪು ಪಂದ್ಯದಲ್ಲಿ ನಂಬರ್ ಒನ್ ಶ್ರೇಯಾಂಕದ ತಾಯ್ ಜು ಯಿಂಗ್ ವಿರುದ್ಧ ಸೋಲು ಕಂಡಿದ್ದರು.
ಇದನ್ನು ಓದಿ:ವರ್ಲ್ಡ್ ಟೂರ್ ಫೈನಲ್ಸ್.. ಮೊದಲ ಸುತ್ತಿನಲ್ಲೇ ಸೋಲುಕಂಡ ಪಿವಿ ಸಿಂಧು