ನವದೆಹಲಿ: ಕ್ರೀಡಾ ಜಗತ್ತಿನಲ್ಲಿ ಅತ್ಯುನ್ನತ ಕ್ರೀಡಾ ಸ್ಪರ್ಧೆಯಾದ ಒಲಿಂಪಿಕ್ಸ್‌ನಲ್ಲಿ ಭಾರತದ ಸಾಧನೆ ಹೇಳಿಕೊಳ್ಳುವಷ್ಟಿಲ್ಲ. ಆದರೂ ವರ್ಷದಿಂದ ವರ್ಷಕ್ಕೆ ಎಲ್ಲಾ ಕ್ರೀಡೆಯಲ್ಲೂ ಭಾರತದ ಕ್ರೀಡಾಪಟುಗಳು ತಮ್ಮ ಪ್ರದರ್ಶನ ಮಟ್ಟವನ್ನು ಉತ್ತಮಗೊಳಿಸ್ತಿರೋದು ಸಮಾಧಾನಕರ ಸಂಗತಿ.
2020ಕ್ಕೆ ಬೇಸಿಗೆ ಒಲಿಂಪಿಕ್ ಆರಂಭಗೊಳ್ಳಲಿದ್ದು, ಜಪಾನ್ ಆತಿಥ್ಯವಹಿಸಲಿದೆ. ಭಾರತ ಒಟ್ಟಾರೆ 24 ಬೇಸಿಗೆ ಒಲಿಂಪಿಕ್ನಲ್ಲಿ ಭಾಗವಹಿಸಿದ್ದು, ಒಟ್ಟು 28 ಪದಕಗಳನ್ನು ಗೆದ್ದಿದೆ. ಇದರಲ್ಲಿ 9 ಚಿನ್ನ, 7 ಬೆಳ್ಳಿ, 12 ಕಂಚಿನ ಪದಕಗಳು ಸೇರಿವೆ. 2016 ರ ಒಲಿಂಪಿಕ್ಸ್‌ನಲ್ಲಿ ಕೇವಲ 2 ಪದಕಕ್ಕೆ ಭಾರತ ತೃಪ್ತಿಪಟ್ಟುಕೊಂಡಿತ್ತು. ಬ್ಯಾಡ್ಮಿಂಟನ್‌ನಲ್ಲಿ ಪಿವಿ ಸಿಂಧು ಬೆಳ್ಳಿ, ಕುಸ್ತಿಯಲ್ಲಿ ಸಾಕ್ಷಿ ಮಲಿಕ್ ಕಂಚು ಗೆದ್ದಿದ್ದರು. ನೂರು ಕೋಟಿಗೂ ಹೆಚ್ಚು ಜನರಿರುವ ಭಾರತಕ್ಕೆ ಸಿಕ್ಕಿದ್ದು ಕೇವಲ 2 ಪದಕ ಎಂಬುದೇ ನಿರಾಶದಾಯಕ ವಿಷಯ.
2016 ರಲ್ಲಿ ಭಾರತೀಯ ಆಟಗಾರರು ಹೆಚ್ಚು ಪದಕಗಳಿಸಲಿಲ್ಲ ಎಂಬ ನಿರಾಶೆಯಿಂದ ಹೊರಬಂದು 2020ರ ಒಲಿಂಪಿಕ್ನಲ್ಲಿ ಹೆಚ್ಚು ಪದಕ ನಿರೀಕ್ಷಿಸಲಾಗಿದ್ದು, ಕಳೆದ ನಾಲ್ಕೈದು ವರ್ಷಗಳಿಂದ ವಿವಿಧ ಕ್ರೀಡೆಯಲ್ಲಿ ಕೆಲವು ಕ್ರೀಡಾಪಟುಗಳು ಉತ್ತಮ ಪ್ರದರ್ಶನ ನೀಡುತ್ತಿದ್ದು ಭಾರತಕ್ಕೆ ಪದಕ ತಂದುಕೊಡುತ್ತಾರೆ ಎಂದು ನಿರೀಕ್ಷಿಸಲಾಗಿದೆ.
1.ಪಿವಿ ಸಿಂಧು
ಹೈದರಾಬಾದ್ನ ಪಿವಿ ಸಿಂಧು ತನ್ನ 21 ವಯಸ್ಸಿನಲ್ಲಿ 2016ರ ರಿಯೋ ಒಲಿಂಪಿಕ್ನಲ್ಲಿ ಬೆಳ್ಳಿಪದಕ ಗೆದ್ದಿದ್ದರು. ಕಳೆದ ಮೂರು ವರ್ಷಗಳಿಂದ ಬ್ಯಾಡ್ಮಿಂಟನ್‌ನಲ್ಲಿ ಉತ್ತಮ ಪ್ರದರ್ಶನ ತೋರುತ್ತಿದ್ದು, 2020ರ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಪದಕ ತಂದುಕೊಡಬಲ್ಲ ಕ್ರೀಡಾಪಟುಗಳಲ್ಲಿ 25ರ ಹರೆಯದ ಸಿಂಧು ಮೊದಲ ಸ್ಥಾನದಲ್ಲಿದ್ದಾರೆ.
2. ಶಿವ ಥಾಪ
ಬಾಕ್ಸಿಂಗ್ ವಿಭಾಗದಲ್ಲಿ ಈಗಾಗಲೇ ವಿಜೇಂದರ್ ಸಿಂಗ್, ಮೇರಿ ಕೋಮ್ ಭಾರತಕ್ಕೆ ಪದಕ ತಂದುಕೊಡುವ ಮೂಲಕ ದೇಶಕ್ಕೆ ಕೀರ್ತಿ ತಂದಿದ್ದಾರೆ. ಇದೀಗ ಯುವ ಬಾಕ್ಸರ್ ಶಿವ ಥಾಪ ಮೇಲೆ ಪದಕ ನಿರೀಕ್ಷೆ ಮಾಡಲಾಗಿದೆ.
ಥಾಪ ಕಳೆದ ವಾರವಷ್ಟೇ ಕಜಕಿಸ್ತಾನದಲ್ಲಿ ನಡೆದ ಪ್ರೆಸಿಡೆಂಟ್ ಕಪ್ ಬಾಕ್ಸಿಂಗ್ ಐತಿಹಾಸಿಕ ಚಿನ್ನ ಗೆದ್ದಿದ್ದರು. 63 ಕೆ.ಜಿ ವಿಭಾಗದಲ್ಲಿ ಇವರಿಂದ ಒಂದು ಪದಕ ನಿರೀಕ್ಷಿಸಲಾಗಿದೆ.