ಬ್ಯಾಂಕಾಕ್: ಭಾರತದ ಸ್ಟಾರ್ ಶಟ್ಲರ್ ಬಿ.ಸಾಯಿ ಪ್ರಣೀತ್ಗೆ ಕೋವಿಡ್-19 ಪಾಸಿಟಿವ್ ದೃಢಪಟ್ಟಿದ್ದು, ಥಾಯ್ಲೆಂಡ್ ಓಪನ್ನಿಂದ ಹೊರ ಬಂದಿದ್ದಾರೆ ಎಂದು ವಿಶ್ವ ಬ್ಯಾಡ್ಮಿಂಟನ್ ಒಕ್ಕೂಟ ತಿಳಿಸಿದೆ.
ಸೋಮವಾರ ನಡೆಸಿದ ಕೋವಿಡ್-19 ಪರೀಕ್ಷೆಯಲ್ಲಿ ಪ್ರಣೀತ್ಗೆ ಪಾಸಿಟಿವ್ ದೃಢಪಟ್ಟಿದ್ದು, ಅವರು ಟೊಯೊಟ ಥಾಯ್ಲೆಂಡ್ ಓಪನ್ನಿಂದ ತಮ್ಮ ಹೆಸರನ್ನು ಹಿಂದಕ್ಕೆ ತೆಗೆದುಕೊಂಡಿದ್ದಾರೆ ಎಂದು ಬಿಡಬ್ಲ್ಯೂಎಫ್ ಮಂಗಳವಾರ ಸಂಜೆ ಹೇಳಿಕೆ ಬಿಡುಗಡೆ ಮಾಡಿದೆ.
ವಿಶ್ವದ 14ನೇ ಶ್ರೇಯಾಂಕದ ಆಟಗಾರ ತಮ್ಮ ಮೊದಲ ಸುತ್ತಿನ ಪಂದ್ಯದಲ್ಲಿ ಮಲೇಷ್ಯಾದ ಡರೇನ್ ಲೀವ್ ಅವರನ್ನು ಎದುರಿಸಬೇಕಾಗಿತ್ತು. ಇದೀಗ ಅವರು ವಾಕ್ ಓವರ್ ಪಡೆದು ಎರಡನೇ ಸುತ್ತಿಗೆ ಪ್ರವೇಶಿಸಿದ್ದಾರೆ.
ಇನ್ನು ಸಾಯಿ ಪ್ರಣೀತ್ ಮುಂದಿನ 10 ದಿನಗಳ ಕಾಲ ಆಸ್ಪತ್ರೆಯಲ್ಲಿ ಕ್ವಾರಂಟೈನ್ನಲ್ಲಿರಲಿದ್ದಾರೆ. ಇವರ ಜೊತೆಗೆ ಅವರ ಸಂಪರ್ಕದಲ್ಲಿದ್ದ ಕಿಡಂಬಿ ಶ್ರೀಕಾಂತ್ ಕೂಡ ಟೂರ್ನಿಯಿಂದ ಹಿಂದೆ ಸರಿದಿದ್ದು, 10 ದಿನಗಳ ಕಾಲ ಕ್ವಾರಂಟೈನ್ನಲ್ಲಿರಲಿದ್ದಾರೆ ಎಂದು ಬಿಡಬ್ಲ್ಯೂಎಫ್ ತಿಳಿಸಿದೆ.
ಶ್ರೀಕಾಂತ್ ತಮ್ಮ ಮೊದಲ ಸುತ್ತಿನ ಪಂದ್ಯದಲ್ಲಿ ಥಾಯ್ಲೆಂಡ್ನ ಸಿಟ್ಟಿಕೋಮ್ ಥಾಮಸಿನ್ ಅವರ ವಿರುದ್ಧ 21-11, 21-11ರಿಂದ ಗೆಲುವು ಸಾಧಿಸಿ ಎರಡನೇ ಸುತ್ತಿಗೆ ತೇರ್ಗಡೆಯಾಗಿದ್ದರು. ಇದೀಗ ಟೂರ್ನಿಯಿಂದ ಹಿಂದೆ ಸರಿದಿರುವುದರಿಂದ 2ನೇ ಸುತ್ತಿನ ಎದುರಾಳಿ ಆ್ಯಂಡರ್ಸ್ ಆ್ಯಂಟನ್ಸೆನ್ ಪ್ರಯಾಸವಿಲ್ಲದೆ ಮೂರನೇ ಸುತ್ತಿಗೆ ಪ್ರವೇಶ ಪಡೆದಿದ್ದಾರೆ.
ಇದನ್ನು ಓದಿ:ನಿಮ್ಮ ಆಟ ಸಂತೋಷದ ಜತೆ ಭರವಸೆ ತಂದಿದೆ.. ಭಾರತ ತಂಡ ಪ್ರಶಂಸಿದ ಸೋನಿಯಾ ಗಾಂಧಿ..