ಒಡೆನ್ಸ್ :ಭಾರತ ಸ್ಟಾರ್ ಶಟ್ಲರ್ ಹಾಗೂ ಮಾಜಿ ಚಾಂಪಿಯನ್ ಕಿಡಂಬಿ ಶ್ರೀಕಾಂತ್ ಮತ್ತು ಸಮೀರ್ ವರ್ಮಾ ಡೆನ್ಮಾರ್ಕ್ ಓಪನ್ ಸೂಪರ್ 1000 ಟೂರ್ನಮೆಂಟ್ನ ಸಿಂಗಲ್ಸ್ ವಿಭಾಗದಲ್ಲಿ ಎರಡನೇ ಸುತ್ತು ಪ್ರವೇಶಿಸಿದ್ದಾರೆ.
2017ರಲ್ಲಿ ಚಾಂಪಿಯನ್ ಆಗಿದ್ದ ಶ್ರೀಕಾಂತ್ ಭಾರತದವರೇ ಆದ ಬಿ ಸಾಯಿ ಪ್ರಣೀತ್ ವಿರುದ್ಧ ಕೇವಲ 30 ನಿಮಿಷಗಳಲ್ಲಿ 21-14, 21-11ರ ನೇರ ಸೆಟ್ಗಳ ಅಂತರದಲ್ಲಿ ಪ್ರಾಬಲ್ಯಯುತ ಜಯ ಸಾಧಿಸಿದರು. 28ನೇ ಶ್ರೇಯಾಂಕದ ಸಮೀರ್ ವರ್ಮಾ ಥಾಯ್ಲೆಂಡ್ನ 21ನೇ ಶ್ರೇಯಾಂಕದ ಕುನ್ಲವತ್ ವಿಟಿದ್ಸರ್ನ್ ವಿರುದ್ಧ 21-17, 21-14ರಲ್ಲಿ 42 ನಿಮಿಷಗಳಲ್ಲಿ ಗೆಲುವು ಸಾಧಿಸಿದರು.
ವಿಶ್ವ ಶ್ರೇಯಾಂಕದಲ್ಲಿ 14ನೇ ಸ್ಥಾನದಲ್ಲಿರುವ ಶ್ರೀಕಾಂತ್ ತಮ್ಮ ಮುಂದಿನ ಸುತ್ತಿನಲ್ಲಿ ಅಗ್ರ ಶ್ರೇಯಾಂಕದ ಜಪಾನ್ನ ಕೆಂಟೊ ಮೊಮೊಟ ವಿರುದ್ಧ ಸೆಣಸಾಡಲಿದ್ದಾರೆ. ಸಮೀರ್ 2ನೇ ಸುತ್ತಿನಲ್ಲಿ 3ನೇ ಶ್ರೇಯಾಂಕದ ಡೆನ್ಮಾರ್ಕ್ ಅಂಡರ್ಸ್ ಆ್ಯಂಟನ್ಸನ್ ವಿರುದ್ಧ ಕಾದಾಡುವ ಸಾಧ್ಯತೆಯಿದೆ.
ಪುರುಷರ ಡಬಲ್ಸ್ನಲ್ಲಿ ಮನು ಅತ್ರಿ ಮತ್ತು ಬಿ ಸುಮೀತ್ ರೆಡ್ಡಿ 18-21,11-21ರಲ್ಲಿ ಮಲೇಷ್ಯಾದ ಗೋಹ್ ಸೀ ಫೀ ಮತ್ತು ನೂರ್ ಇಜುದ್ದೀನ್ ವಿರುದ್ಧ ಸೋಲು ಕಂಡರು. ವಿಶ್ವ ಚಾಂಪಿಯನ್ ಸಿಂಧು ಮತ್ತು ಅನುಭವಿ ಸೈನಾ ನೆಹ್ವಾಲ್ ಇಂದು ಮಹಿಳೆಯರ ಸಿಂಗಲ್ಸ್ನಲ್ಲಿ ಕಣಕ್ಕಿಳಿಯಲಿದ್ದಾರೆ.
ಇದನ್ನು ಓದಿ:ಡೆನ್ಮಾರ್ಕ್ ಓಪನ್.. ವಿಶ್ರಾಂತಿ ಬಳಿಕ ಅಂಗಳಕ್ಕಿಳಿಯಲು ಸಜ್ಜಾದ ಪಿವಿ ಸಿಂಧು..