ನವದೆಹಲಿ: ಪುರುಷರ ಬ್ಯಾಡ್ಮಿಂಟನ್ ಡಬಲ್ಸ್ ವಿಭಾಗದ ಭರವಸೆಯ ಜೋಡಿಯಾದ ಸಾತ್ವಿಕ್-ಚಿರಾಗ್ ಶೆಟ್ಟಿ ಬಿಡಬ್ಲುಎಫ್ ರ್ಯಾಂಕಿಂಗ್ನಲ್ಲಿ 7ನೇ ಸ್ಥಾನಕ್ಕೇರುವ ಮೂಲಕ ವೃತ್ತಿ ಜೀವನದ ಶ್ರೇಷ್ಠ ಸಾಧನೆ ಮಾಡಿದ್ದಾರೆ.
2019ರ ಥಾಯ್ಲೆಂಡ್ ಓಪನ್ ಜಯಿಸಿದ್ದ ಸಾತ್ವಿಕ್-ಚಿರಾಗ್ ಜೋಡಿ ಪ್ರೆಂಚ್ ಓಪನ್ ಫೈನಲ್, ಚೀನಾ ಓಪನ್ ಸೆಮಿಫೈನಲ್ ತಲುಪಿತ್ತು. ಅದರಲ್ಲೂ ಅಗ್ರ ಶ್ರೇಯಾಂಕದ ಜೋಡಿಗಳಿಗೆ ಮಣ್ಣು ಮುಕ್ಕಿಸಿದ್ದ ಈ ಜೋಡಿ ಡಬಲ್ಸ್ ವಿಭಾಗದ ಶ್ರೇಯಾಂಕದಲ್ಲಿ ಜೀವನಶ್ರೇಷ್ಠ ಸಾಧನೆ ಮಾಡಿದೆ.
ಅಗ್ರ 10ಕ್ಕೆ ಎಂಟ್ರಿ ಕೊಟ್ಟ ಸಾಯಿ ಪ್ರಣೀತ್:
ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ನಲ್ಲಿ 30 ವರ್ಷಗಳ ನಂತರ ಪದಕ ತಂದುಕೊಟ್ಟಿದ್ದ 27 ವರ್ಷದ ಸಾಯಿ ಪ್ರಣೀತ್ ಇದೇ ಮೊದಲ ಬಾರಿಗೆ ರ್ಯಾಂಕಿಂಗ್ ಟಾಪ್10 ಗೆ ಎಂಟ್ರಿಕೊಟ್ಟಿದ್ದಾರೆ. ಆದರೆ ಪುರುಷರ ಸಿಂಗಲ್ಸ್ ವಿಭಾಗದ ಸ್ಟಾರ್ ಆಟಗಾರ ಕಿಡಂಬಿ ಶ್ರೀಕಾಂತ್ ಪುರುಷರ ಸಿಂಗಲ್ಸ್ ರ್ಯಾಂಕಿಂಗ್ನಲ್ಲಿ 13ನೇ ಸ್ಥಾನಕ್ಕೆ ಕುಸಿದಿದ್ದಾರೆ.
ಉಳಿದಂತೆ ಸಮೀರ್ ವರ್ಮಾ 13, ಪರುಪಳ್ಳಿ ಕಶ್ಯಪ್ 25ನೇ ಸ್ಥಾನ ಪಡೆದಿದ್ದಾರೆ. ಮಹಿಳೆಯರ ವಿಭಾಗದಲ್ಲಿ ಸಿಂಧು 6 ಹಾಗೂ ಸೈನಾ 9ರಲ್ಲಿ ಮುಂದುವರಿದಿದ್ದಾರೆ.