ಬಾಸೆಲ್(ಸ್ವಿಟ್ಜೆರ್ಲ್ಯಾಂಡ್):ಭಾರತದ ನಂ.1 ಷಟ್ಲರ್ ಪಿ.ವಿ.ಸಿಂಧು ಬಿಡಬ್ಲ್ಯೂಎಫ್ ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್ಶಿಪ್ನ ಸಿಂಗಲ್ಸ್ ವಿಭಾಗದಲ್ಲಿ ಇಂದು ನಡೆದ ಸೆಮಿಫೈನಲ್ನಲ್ಲಿ ಚೀನಾದ ಚೆನ್ ಯು ಫೀ ಅವರನ್ನು ಮಣಿಸಿ ಫೈನಲ್ ಪ್ರವೇಶಿಸಿದ್ದಾರೆ. ಈ ಮೂಲಕ ಐತಿಹಾಸಿಕ ದಾಖಲೆ ನಿರ್ಮಿಸಿದ್ದಾರೆ.
ಈ ಪಂದ್ಯವೂ ಸೇರಿ ಸಿಂಧು ಒಟ್ಟು ಮೂರು ಬಾರಿ ಫೈನಲ್ಗೇರಿದಂತಾಗಿದೆ. ಕಳೆದ ಎರಡು ವರ್ಷಗಳಿಂದ ಪ್ರತಿಷ್ಠಿತ ಟೂರ್ನಿಗಳಲ್ಲಿ ಎರಡು ಬಾರಿ ಫೈನಲ್ಗೇರಿ ಬೆಳ್ಳಿ ಪದಕಕ್ಕೆ ಸಮಾಧಾನಪಟ್ಟುಕೊಂಡಿದ್ದರು. ಈಗ ಮತ್ತೊಮ್ಮೆ ಫೈನಲ್ ಪ್ರವೇಶಿದ್ದು, ಇದರೊಂದಿಗೆ ಕೂಟದಲ್ಲಿ ಭಾರತಕ್ಕೆ ಪದಕ ಖಚಿತಪಡಿಸಿದ್ದಾರೆ.
ಇಂದಿನ ಪಂದ್ಯದಲ್ಲಿ ಚೆನ್ ಯು ಫೀ ಅವರ ವಿರುದ್ಧ 21-7, 21-14 ಪಾಯಿಂಟ್ಸ್ಗಳ ಅಂತದಿಂದ ಸಿಂಧು ಜಯ ದಾಖಲಿಸಿದರು. 40 ನಿಮಿಷದಲ್ಲಿ ಮುಕ್ತಾಯಗೊಂಡ ಈ ಪಂದ್ಯ ನೋಡುಗರಲ್ಲಿ ರೋಮಾಂಚನ ಉಂಟು ಮಾಡಿತು. ಐದು ಪದಕಗಳನ್ನು ಗೆಲ್ಲುವ ಎರಡನೇ ಆಟಗಾರ್ತಿಯೂ ಆಗಿದ್ದಾರೆ.
ವೃತ್ತಿ ಜೀವನದ 5ನೇ ಪದಕ ಖಚಿತಪಡಿಸಿಕೊಂಡಿವ ಸಿಂಧು ಈ ಹಿಂದೆ 2017, 2018ರಲ್ಲಿ ಬೆಳ್ಳಿ ಮತ್ತು 2013, 2014ರಲ್ಲಿ ಕಂಚು ಜಯಿಸಿದ್ದರು. ನಾಳೆ (ಭಾನುವಾರ) ನಡೆಯಲಿರುವ ಫೈನಲ್ ಪಂದ್ಯದಲ್ಲಿ ಚಿನ್ನಕ್ಕೆ ಮುತ್ತಿಕ್ಕುವ ವಿಶ್ವಾಸದಲ್ಲಿದ್ದಾರೆ ಸಿಂಧು. ರಚನೋಕ್ ಅಥವಾ ಒಕುಹರಾತ್ ಅವರೊಂದಿಗೆ ಸೆಣಸಲಿದ್ದಾರೆ.
ನಿನ್ನೆ ನಡೆದ ಎಂಟರ ಘಟ್ಟದ ಹೋರಾಟದಲ್ಲಿ ಏಷ್ಯಾಡ್ ಸ್ವರ್ಣ ಪದಕ ವಿಜೇತೆ ಮತ್ತು ವಿಶ್ವ ಬ್ಯಾಡ್ಮಿಂಟನ್ನಲ್ಲಿ 2ನೇ ಶ್ರೇಯಾಂಕ ಪಡೆದಿರುವ ಚೀನಾ ತೈಪೆಯ ತೈ ಜು ಯಿಂಗ್ ಎದುರು 12-21, 23-21, 21-19 ಪಾಯಿಂಟ್ಸ್ಗಳ ಅಂತರದಿಂದ ಜಯ ದಾಖಲಿಸಿ ಸೆಮಿಫೈನಲ್ ಪ್ರವೇಶಿದ್ದರು.