ಬಾಸೆಲ್(ಸ್ವಿಜರ್ಲೆಂಡ್):ಭಾರತದ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು (ಪುಸರ್ಲಾ ವೆಂಕಟ್ ಸಿಂಧು) ಬ್ಯಾಡ್ಮಿಂಟನ್ ವರ್ಲ್ಡ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಜಪಾನ್ನ ನೊಜೊಮಿ ಒಕುಹಾರ ವಿರುದ್ಧ ಭರ್ಜರಿ ಗೆಲುವು ಸಾಧಿಸಿ ಚಿನ್ನಕ್ಕೆ ಮುತ್ತಿಕ್ಕಿದ್ದಾರೆ.
ಇಂದು ನಡೆದ ಬಿಡಬ್ಲ್ಯುಎಫ್ ವಿಶ್ವ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ವಿಜಯ ಸಾಧಿಸಿ ಈ ಪ್ರಶಸ್ತಿ ಗೆದ್ದ ಭಾರತದ ಮೊದಲ ಆಟಗಾರ್ತಿಯಾಗಿ ಐತಿಹಾಸಿಕ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. 2017ರ ಫೈನಲ್‌ನಲ್ಲಿ ನೊಜೊಮಿ ಒಕುಹಾರ ವಿರುದ್ಧವೇ ಸೋತು ನಿರಾಸೆ ಹೊಂದಿದ್ದ ಸಿಂಧು, ಈಗ ಪ್ರಶಸ್ತಿ ಗೆದ್ದು ಸೇಡು ತೀರಿಸಿಕೊಂಡಿದ್ದಾರೆ.
ಮೊದಲ ಸುತ್ತಿನ ಹಣಾಹಣಿಯಿಂದಲೇ ತಾಳ್ಮೆ ಮತ್ತು ಆಕ್ರಮಣಾಕಾರಿ ಆಟದಿಂದ ಸಿಂಧು ಎಲ್ಲಿಯೂ ಅನಗತ್ಯ ತಪ್ಪುಗಳನ್ನು ಮಾಡಲಿಲ್ಲ. ಈ ಮೂಲಕ 21-7, 21-7 ಪಾಯಿಂಟ್ಸ್ ಗಳಿಸುವ ಮೂಲಕ ಎರಡು ಸೆಟ್ಗಳಲ್ಲಿಯೇ ಎದುರಾಳಿಯನ್ನು ಸೆದೆಬಡಿದರು. ಕಳೆದ ಎರಡು ಟೂರ್ನಿಗಳಲ್ಲಿ ಬೆಳ್ಳಿಗೆ ತೃಪ್ತಿ ಪಟ್ಟಿದ್ದ ಸಿಂಧು, ಇಲ್ಲಿ ಚಿನ್ನ ಗೆಲ್ಲಲು ದೊರೆತಿದ್ದ ಅವಕಾಶವನ್ನು ಅತ್ಯುತ್ತಮವಾಗಿ ಬಳಸಿಕೊಂಡರು. ಅಲ್ಲದೆ, ಜಪಾನ್ ಆಟಗಾರ್ತಿಗೆ ಪ್ರತಿ ಹೋರಾಟದಲ್ಲೂ ಅಂಕ ಗಳಿಸಲು ಸಿಂಧು ಅವಕಾಶ ನೀಡಲಿಲ್ಲ.
ಶನಿವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ವಿಶ್ವದ 3ನೇ ಶ್ರೇಯಾಂಕದ ಆಟಗಾರ್ತಿ ಚೀನಾದ ಚೆನ್ ಯು ಫಿ ಅವರನ್ನು 21-7, 21-14 ಅಂಕಗಳಿಂದ ಸೋಲಿಸಿ ಫೈನಲ್ ಪ್ರವೇಶಿಸಿದ್ದರು. ಇದರೊಂದಿಗೆ ಬಿಡಬ್ಲ್ಯುಎಫ್ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಸತತ ಮೂರು ಬಾರಿ ಫೈನಲ್‌ಗೇರಿದ ವಿಶ್ವದ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಗೂ ಪಾತ್ರರಾಗಿದರು.
ಪಿ.ವಿ.ಸಿಂಧು 2017, 2018ರ ಪ್ರತಿಷ್ಠಿತ ಟೂರ್ನಿಗಳಲ್ಲಿ ಫೈನಲ್ ಪ್ರವೇಶಿಸಿ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟಕೊಂಡಿದ್ದರು. 2013, 2014ರಲ್ಲಿ ಕಂಚಿನ ಪದಕ ಗೆದ್ದಿದ್ದರು. ಈಗ ಚಿನ್ನ ಮುಡಿಗೇರಿಸಿಕೊಂಡಿದ್ದು, ಬಿಡಬ್ಲ್ಯುಎಫ್ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಒಟ್ಟು 5 ಪದಕ ಗೆದ್ದಿದ್ದಾರೆ. ನೊಜೊಮಿ ಮತ್ತು ಸಿಂಧು ಒಟ್ಟು 16 ಬಾರಿ ಮುಖಾಮುಖಿಯಾಗಿದ್ದಾರೆ. ಅದರಲ್ಲಿ ಸಿಂಧು 9 ಪಂದ್ಯಗಳನ್ನು ಗೆದ್ದರೆ, ನೊಜೊಮಿ 7 ಪಂದ್ಯಗಳಲ್ಲಿ ಜಯಿಸಿದ್ದಾರೆ.