ನವದೆಹಲಿ :ಮೊದಲ ವಿಶ್ವ ಚಾಂಪಿಯನ್ಶಿಪ್ನಲ್ಲಿ ಅದ್ಭುತ ಪ್ರದರ್ಶನ ತೋರಿರುವ ಯುವ ಶಟ್ಲರ್ ಲಕ್ಷ್ಯಸೇನ್, ತಮಗೆ ಕಂಚಿನ ಪದಕ ಗೆದ್ದಿರುವುದು ತೃಪ್ತಿ ತಂದಿಲ್ಲ. ಆದರೆ, ಮುಂದಿನ ಬಾರಿ ಖಂಡಿತ ಚಿನ್ನದ ಪದಕ ಗೆಲ್ಲಲು ಪ್ರಯತ್ನಿಸುತ್ತೇನೆ ಎಂದು ಹೇಳಿದ್ದಾರೆ.
20 ವರ್ಷದ ಶಟ್ಲರ್ ಶನಿವಾರ ನಡೆದ ಬಿಡಬ್ಲ್ಯೂಎಫ್ ವಿಶ್ವ ಚಾಂಪಿಯನ್‌ಶಿಪ್ ಸೆಮಿಫೈನಲ್ನಲ್ಲಿ ಭಾರತದವರೇ ಆದ ಕಿಡಂಬಿ ಶ್ರೀಕಾಂತ್ ವಿರುದ್ಧ 21-17, 14-21, 17-21ರ ರೋಚಕ ಕದನದಲ್ಲಿ ಸೋಲು ಕಂಡು ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡರು.
"ಇದೊಂದು ತುಂಬಾ ದೊಡ್ಡ ಟೂರ್ನಮೆಂಟ್ ಮತ್ತು ಈ ರೀತಿ ಹತ್ತಿರಕ್ಕೆ ಬಂದು ಸೋಲು ಕಂಡಾಗ ಅದನ್ನು ಸ್ವೀಕರಿಸುವುದು ತುಂಬಾ ಕಷ್ಟವಾಗುತ್ತದೆ. ನಾನೂ ಕನಿಷ್ಠ ಕಂಚನ್ನಾದರೂ ಗೆದ್ದಿದ್ದೇನೆ. ಆದರೆ, ಇದರಿಂದ ನಾನು ಸಂತೋಷವಾಗಿಲ್ಲ. ಸೆಮಿಫೈನಲ್ನಲ್ಲಿ ನಾನು ನೀಡಿದ ಪ್ರದರ್ಶನ ನನಗೆ ತೃಪ್ತಿ ನೀಡಿಲ್ಲ" ಎಂದು ಲಕ್ಷ್ಯ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
"ನಾನು ಟೂರ್ನಿಯಲ್ಲಿ ಸಾಕಷ್ಟು ಒಳ್ಳೆಯ ಪಂದ್ಯಗಳನ್ನಾಡಿದ್ದೇನೆ, ತುಂಬಾ ಕಠಿಣವಾದ ಎದುರಾಳಿಗಳನ್ನು ಎದುರಿಸಿದ್ದೇನೆ, ಸೆಮಿಫೈನಲ್ ಪಂದ್ಯ ಕೂಡ ತುಂಬಾ ಗೆಲುವಿಗೆ ಹತ್ತಿರವಾದ ಪಂದ್ಯವಾಗಿತ್ತು. ಈ ಪದಕ ನನಗೆ ಮುಂದೆ ಹೋಗುವುದಕ್ಕೆ ಒಂದು ವಿಶ್ವಾಸ ನೀಡಿದೆ. ಮುಂದಿನ ಬಾರಿ ನಾನು ಚಿನ್ನದ ಪದಕಕ್ಕಾಗಿ ಹೋಗುವೆ" ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.