ನವದೆಹಲಿ: ವಿಶ್ವದ ನಂಬರ್ ಒನ್ ಆಟಗಾರ ಜಪಾನ್‌ನ ಕೆಂಟೋ ಮೊಮೊಟ ಅವರಿಗೆ ಕೋವಿಡ್ ಪರೀಕ್ಷೆಯಲ್ಲಿ ಪಾಸಿಟಿವ್ ದೃಢಪಟ್ಟಿರುವುದರಿಂದ ಥಾಯ್ಲೆಂಡ್ ಓಪನ್ನಲ್ಲಿ ಪಾಲ್ಗೊಳ್ಳಬೇಕಿದ್ದ ಇಡೀ ಜಪಾನ್ ರಾಷ್ಟ್ರೀಯ ತಂಡ ಟೂರ್ನಿಯಿಂದ ಹೊರಗುಳಿದಿದೆ ಎಂದು ಬಿಡಬ್ಲ್ಯೂಎಫ್ ಭಾನುವಾರ ತಿಳಿಸಿದೆ.
ವಿಶ್ವದ ನಂಬರ್ ಒನ್ ಆಟಗಾರನಾಗಿರುವ ಮೊಮೊಟ ಕಳೆದ ಜನವರಿಯಲ್ಲಿ ಮಲೇಷಿಯಾ ಮಾಸ್ಟರ್ ಟ್ರೋಫಿ ಗೆದ್ದು ತವರಿಗೆ ಮರಳುವ ಸಂದರ್ಭದಲ್ಲಿ ಕ್ವಾಲಾಲಾಂಪುರ ಏರ್ಪೋರ್ಟ್ ಬಳಿ ಕಾರು ಅಪಘಾತಕ್ಕೀಡಾಗಿ ಗಂಭೀರ ಗಾಯಗೊಂಡಿದ್ದರು. ನಂತರ ಚೇತರಿಸಿಕೊಂಡಿದ್ದ ಅವರು ಬ್ಯಾಂಕಾಂಕ್ನಲ್ಲಿ ತಮ್ಮ ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ಗೆ ಮರಳಲು ಎದುರು ನೋಡುತ್ತಿದ್ದರು. ಆದರೆ ಅವರ ಕಮ್ಬ್ಯಾಕ್ ಆಸೆಯನ್ನು ಕೋವಿಡ್ ದೂರ ಮಾಡಿದೆ.
"ಜಪಾನ್‌ನ ವಿಶ್ವದ ನಂಬರ್ ಒನ್ ಆಟಗಾರ ಕೆಂಟೊ ಮೊಮೊಟ ಬ್ಯಾಂಕಾಕ್ಗೆ ಹೊರಡುವ ಮುನ್ನ ನರಿಟಾ ವಿಮಾನ ನಿಲ್ದಾಣದಲ್ಲಿ ಕಡ್ಡಾಯವಾಗಿದ್ದ ಪಿಸಿಆರ್ ಪರೀಕ್ಷೆಗೆ ಒಳಗಾಗಿದ್ದು, ಕೋವಿಡ್ ಪಾಸಿಟಿವ್ ಇರುವುದು ದೃಢಪಟ್ಟಿದೆ" ಎಂದು ಬ್ಯಾಡ್ಮಿಂಟನ್ ಫಡರೇಶನ್ ವರ್ಲ್ಡ್ ಫಡರೇಶನ್ ಮತ್ತು ಬ್ಯಾಡ್ಮಿಂಟನ್ ಅಸೋಸಿಯೇಷನ್ ಆಫ್ ಥಾಯ್ಲೆಂಡ್ ಹೇಳಿಕೆ ಬಿಡುಗಡೆ ಮಾಡಿದೆ.
ಮೊಮೊಟಗೆ ಕೋವಿಡ್ ದೃಢಪಟ್ಟ ಕಾರಣ ನಿಪ್ಪಾನ್ ಬ್ಯಾಡ್ಮಿಂಟನ್ ಅಸೋಸಿಯೇಷನ್(ಎನ್ಬಿಎ) ಯೋನೆಕ್ಸ್ ಥಾಯ್ಲೆಂಡ್ ಓಪನ್ ಮತ್ತು ಟೊಯೊಟೊ ಥಾಯ್ಲೆಂಡ್ ಓಪನ್ನಿಂದ ತಮ್ಮ ಎಲ್ಲಾ ಸಿಂಗಲ್ಸ್ ಮತ್ತು ಡಬಲ್ಸ್ ಆಟಗಾರ ಹೆಸರನ್ನು ಹಿಂತೆಗೆದುಕೊಂಡಿದೆ. ಎರಡು ಟೂರ್ನ್ಮೆಂಟ್ಗೂ ಶೀಘ್ರದಲ್ಲಿ ಬದಲಿ ಆಟಗಾರರನ್ನು ಹೆಸರಿಸುವುದಾಗಿ ತಿಳಿಸಿದೆ ಎಂದು ಹೇಳಿಕೆಯಲ್ಲಿ ಮಾಹಿತಿ ನೀಡಲಾಗಿದೆ.
ಇದನ್ನು ಓದಿ: ಪದಕ ಬೇಟೆಗೆ ಥಾಯ್ಲೆಂಡ್ಗೆ ಹೊರಟ ಸೈನಾ ತಂಡ: ಲಂಡನ್ನಿಂದ ಹಾರಿದ ಪಿ.ವಿ.ಸಿಂಧು