ನವದೆಹಲಿ:ಅಂತಾರಾಷ್ಟ್ರೀಯ ಒಲಿಂಪಿಕ್ ದಿನವಾದ ಇಂದು ಕುಸ್ತಿಪಟು ಸುಶೀಲ್ ಕುಮಾರ್ ಹಾಗೂ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್, ತಾವು ಪದಕ ಗೆದ್ದ ನೆನಪನ್ನು ಹಂಚಿಕೊಂಡಿದ್ದಾರೆ.
"2008ರಲ್ಲಿ ಒಲಿಂಪಿಕ್ ಪದಕ ಗೆದ್ದ ಬಳಿಕ ನನ್ನ ಜೀವನ ಬದಲಾಯಿತು. 2012ರಲ್ಲಿ ಮತ್ತೊಂದು ಪದಕದೊಂದಿಗೆ ಇತಿಹಾಸ ಸೃಷ್ಟಿಯಾಯಿತು. ಪದಕದ ಬಣ್ಣವನ್ನು ಮತ್ತೊಮ್ಮೆ ಬದಲಾಯಿಸಲು ಕಠಿಣ ಶ್ರಮ ಪಡುತ್ತಿದ್ದೇನೆ" ಎಂದು ಸುಶೀಲ್ ಕುಮಾರ್ ಟ್ವೀಟ್ ಮಾಡಿದ್ದಾರೆ.
ಸುಶೀಲ್ ಕುಮಾರ್, 2008ರ ಒಲಿಂಪಿಕ್ನಲ್ಲಿ ಕಂಚಿನ ಪದಕ, 2012ರಲ್ಲಿ ಬೆಳ್ಳಿ ಪದಕ ಗೆದ್ದಿದ್ದರು. ಇದೀಗ ಮುಂಬರುವ ಒಲಿಂಪಿಕ್ನಲ್ಲಿ ಚಿನ್ನ ಗೆಲ್ಲುವ ಇಂಗಿತ ವ್ಯಕ್ತಪಡಿಸಿದ್ದಾರೆ.
"2012ರ ಒಲಿಂಪಿಕ್ನಲ್ಲಿ ಕಂಚಿನ ಪದಕ ಗೆದ್ದಿದ್ದು ನನ್ನ ವೃತ್ತಿ ಜೀವನದಲ್ಲೇ ಅತ್ಯಮೂಲ್ಯವಾದ ಕ್ಷಣ. ಇದು, 1999ರಲ್ಲಿ ನಾನು ಬ್ಯಾಡ್ಮಿಂಟನ್ಗೆ ಸೇರಿದ್ದಾಗಿನಿಂದಲೂ ನನ್ನ ಹಾಗೂ ನನ್ನ ಪೋಷಕರ ಕನಸಾಗಿತ್ತು. ಪರಿಶ್ರಮ, ವಿಶ್ವಾಸ, ಕೆಲವು ತ್ಯಾಗಗಳು ಕನಸನ್ನು ನನಸಾಗಿಸಿತು" ಎಂದು ಸೈನಾ ನೆಹ್ವಾಲ್ ಟ್ವೀಟ್ ಮಾಡಿದ್ದಾರೆ.
ಆಧುನಿಕ ಒಲಿಂಪಿಕ್ ಕ್ರೀಡಾಕೂಟದ ಆರಂಭದ ನೆನಪಿಗಾಗಿ 1948 ರಿಂದ ಪ್ರತಿ ವರ್ಷ ಜೂನ್ 23 ರಂದು ಅಂತಾರಾಷ್ಟ್ರೀಯ ಒಲಿಂಪಿಕ್ ದಿನವನ್ನು ಆಚರಿಸಲಾಗುತ್ತದೆ. ಈ ವರ್ಷ ಜುಲೈ-ಆಗಸ್ಟ್‌ನಲ್ಲಿ ನಡೆಯಬೇಕಿದ್ದ ಟೋಕಿಯೊ ಒಲಿಂಪಿಕ್ಸ್, ಕೊರೊನಾ ಬಿಕ್ಕಟ್ಟಿನಿಂದಾಗಿ ಮುಂದಿನ ವರ್ಷಕ್ಕೆ ಮುಂದೂಡಲಾಗಿದೆ.