ಒಡೆನ್ಸ್ :ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದಿರುವ ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಪಿ ವಿ ಸಿಂಧು ಎರಡು ತಿಂಗಳ ವಿರಾಮದ ಬಳಿಕ ಅಂಗಳಿಕ್ಕಿಳಿಯಲಿದ್ದಾರೆ. ಹಾಲಿ ವಿಶ್ವ ಚಾಂಪಿಯನ್ ಮಂಗಳವಾರದಿಂದ ಆರಂಭವಾಗಲಿರುವ ಡೆನ್ಮಾರ್ಕ್ ಓಪನ್ ವರ್ಲ್ಡ್ ಟೂರ್ ಸೂಪರ್ 1000 ಅವರು ಕಣಕ್ಕಿಳಿಯಲಿದ್ದಾರೆ.
ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಸತತ ಪಂದ್ಯಗಳನ್ನಾಡಿ ದಣಿದಿದ್ದ ಕಂಚಿನ ಪದಕ ವಿಜೇತೆ ಸಿಂಧು ಕೆಲ ಸಮಯ ವಿರಾಮ ಬಯಸಿದ್ದರು. ಇದೀಗ 8,50,000 ಡಾಲರ್ ಬಹುಮಾನ ಮೊತ್ತದ ಟೂರ್ನಿ ಆಗಿರುವ ಡೆನ್ಮಾರ್ಕ್ ಓಪನ್ ಮೂಲಕ ಋತುವನ್ನು ಪುನಾರಂಭ ಮಾಡುವುದಕ್ಕೆ ಸಿದ್ಧರಾಗಿದ್ದಾರೆ. ಈ ಟೂರ್ನಿ ಕೋವಿಡ್‌ನಿಂದಾಗಿ ಸ್ಥಗಿತಗೊಂಡಿತ್ತು.
ಉಬರ್ ಕಪ್ ಫೈನಲ್ ಟೂರ್ನಿಯ ವೇಳೆ ಸೊಂಟದ ನೋವಿನ ಕಾರಣ ಟೂರ್ನಿಯನ್ನು ಅರ್ಧದಲ್ಲೇ ತ್ಯಜಿಸಿದ್ದ ಸೈನಾ ನೆಹ್ವಾಲ್ ಕೂಡ ಚೇತರಿಸಿಕೊಂಡಿದ್ದಾರೆ. ಅವರೂ ಕೂಡ ಅಖಾಡಕ್ಕಿಳಿಯಲಿದ್ದಾರೆ.
ನಾಲ್ಕನೇ ಶ್ರೇಯಾಂಕ ಪಡೆದಿರುವ ಸಿಂಧು ತಮ್ಮ ಮೊದಲ ಪಂದ್ಯದಲ್ಲಿ ಟರ್ಕಿಯ ನೆಸ್ಲಿಹನ್ ಯಿಗಿತ್ ವಿರುದ್ಧ ಹಾಗೂ ಸೈನಾ, ಜಪಾನ್‌ನ ಅಯಾ ಒಹೊರಿ ವಿರುದ್ಧ ಆಡಲಿದ್ದಾರೆ. ಸಿಂಧು ಮೊದಲ ಪಂದ್ಯದಲ್ಲಿ ಗೆದ್ದರೆ 2ನೇ ಸುತ್ತಿನಲ್ಲಿ ಥಾಯ್ಲೆಂಡ್ನ ಬುಸನನ್ ಒಗ್ಬಮ್ರುಂಗ್ಫನ್ ವಿರುದ್ಧ ಸೆಣಸಬೇಕಾಗಿದೆ.